ತೀವ್ರಗೊಂಡ ಅಂಫಾನ್ ಚಂಡಮಾರುತ

ಹೊಸದಿಲ್ಲಿ, ಮೇ 18: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಅಂಫಾನ್ ಚಂಡಮಾರುತ, ತೀವ್ರಗೊಂಡು ಸೂಪರ್ ಚಂಡಮಾರುತವಾಗಿ ಪರಿವರ್ತನೆಗೊಂಡಿದ್ದು ಬುಧವಾರ ಪಶ್ಚಿಮಬಂಗಾಳದ ಮೇಲೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಸೋಮವಾರ ಮಧ್ಯಾಹ್ನದಿಂದ ತೀವ್ರಗೊಂಡಿರುವ ಅಂಫಾನ್ ಚಂಡಮಾರುತದಿಂದ ಒಡಿಶಾದ ಕರಾವಳಿ ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿರುವ ಮುನ್ಸೂಚನೆ ದೊರೆತ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಚಂಡಮಾರುತದ ಪ್ರಭಾವಕ್ಕೆ ಒಳಗಾಗುವ ಪ್ರದೇಶದ ಜನರನ್ನು ತೆರವುಗೊಳಿಸುವ ಪ್ರಕ್ರಿಯೆಗೆ ವೇಗ ನೀಡಿದೆ. ಮೇ 21ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸಲಹೆ ನೀಡಲಾಗಿದೆ ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ ಪಿಕೆ ಜೇನ ಹೇಳಿದ್ದಾರೆ. ಅಲ್ಲದೆ ಮೇ 21ರವರೆಗೆ ಒಡಿಶಾ, ಪಶ್ಚಿಮಬಂಗಾಳ, ಸಿಕ್ಕಿಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ಎಚ್ಚರಿಸಿದೆ.
ತೀವ್ರ ಚಂಡಮಾರುತದ ಸ್ವರೂಪ ಪಡೆದ ಅಂಫಾನ್ ಚಂಡಮಾರುತ ದಿಘಾ ಮತ್ತು ಹಟಿಯಾ ದ್ವೀಪದ ಮೂಲಕ ಪಶ್ಚಿಮಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ ಎಂದು ಇಲಾಖೆ ತಿಳಿಸಿದೆ. ಅಂಫಾನ್ ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ಯ 25 ತಂಡಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ಇನ್ನೂ 12 ತಂಡಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಅಲ್ಲದೆ ದೇಶದ ವಿವಿಧೆಡೆ ಇರುವ 24 ತಂಡಗಳನ್ನು ಸಿದ್ಧವಾಗಿರುವಂತೆ ಸೂಚಿಸಲಾಗಿದೆ ಎಂದು ಎನ್‌ಡಿಆರ್‌ಎಫ್‌ನ ಮಹಾನಿರ್ದೇಶಕರು ಹೇಳಿದ್ದಾರೆ.







