ಸುರಕ್ಷಿತ ಅಂತರ ಕಾಯ್ದುಕೊಳ್ಳಿ: ಸಚಿವ ಬೈರತಿ ಬಸವರಾಜ್
ಬೆಂಗಳೂರು, ಮೇ 18: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಲಹೆಯಂತೆ ಎಲ್ಲರೂ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಕೊರೋನ ಸೋಂಕಿನಿಂದ ಮುಕ್ತರಾಗಬೇಕಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.
ರಮಝಾನ್ ಹಬ್ಬದ ಪ್ರಯುಕ್ತ ಟಿನ್ ಫ್ಯಾಕ್ಟರಿಯ ದರ್ಗಾ ಮೊಹಲ್ಲದ ನಿವಾಸಿಗಳಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೋನ ವೈರಸ್ ತಡೆಗಟ್ಟಲು ಲಾಕ್‍ಡೌನ್ ಅವಧಿಯನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ. ಕೊರೋನ ವೈರಸ್‍ನಿಂದ ಮುಕ್ತಿ ಹೊಂದಲು ಎಲ್ಲರೂ ಮನೆಯಲ್ಲಿಯೇ ಇರುವ ಅವಶ್ಯಕತೆ ಇದೆ. ಜನರು ಅಗತ್ಯವಿರುವ ಸಂದರ್ಭದಲ್ಲಿ ಮಾತ್ರ ಹೊರ ಬರಬೇಕು. ಹೊರಗಡೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.
ಮಾಜಿ ನಗರಸಭಾ ಸದಸ್ಯ ಅಮನುಲ್ಲಾ ಖಾನ್ ಮಾತನಾಡಿ, ಮಾಧ್ಯಮಗಳಲ್ಲಿ ಮುಸ್ಲಿಮರಿಂದ ಕೊರೋನ ವೈರಸ್ ಹರಡುತ್ತಿದೆ ಎಂದು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸುವುದು ತಪ್ಪು. ನಾವೆಲ್ಲರೂ ಒಗ್ಗಟ್ಟಿನಿಂದ ಕೊರೋನ ವೈರಸ್ ವಿರುದ್ಧ ಹೋರಾಡಬೇಕಿದೆ ಎಂದರು.
ಈ ವೇಳೆ ಪಾಲಿಕೆ ಸದಸ್ಯರಾದ ಸುರೇಶ್, ಶ್ರೀಕಾಂತ್, ಮುಖಂಡರಾದ ಬಾಕ್ಸರ್ ನಾಗರಾಜ್, ಮಾರ್ಕೆಟ್ ರಮೇಶ್ ಉಪಸ್ಥಿತರಿದ್ದರು.