ಮೇ19ರಿಂದ ಸರಕಾರಿ ಬಸ್‌ಗಳ ಓಡಾಟ ಆರಂಭ : ಕೆಎಸ್ಸಾರ್ಟಿಸಿ ಅಧಿಕಾರಿ
ಮಂಗಳೂರು, ಮೇ 18: ರಾಜ್ಯ ಸರಕಾರ ಲಾಕ್‌ಡೌನ್ ಸಡಿಲಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡಿದ ಮೇರೆಗೆ ಮೇ 19ರಿಂದ ದ.ಕ. ಜಿಲ್ಲೆಯಲ್ಲಿ ಸರಕಾರಿ ಬಸ್‌ಗಳ ಓಡಾಟ ಆರಂಭಗೊಳ್ಳಲಿದೆ.
ಕೊರೋನ ವೈರಸ್ ಹರಡದಂತೆ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಲು ಅನುಕೂಲವಾಗುವಂತೆ ಶೇ.50ರಷ್ಟು ಮಂದಿಯನ್ನು ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಹಾಗಾಗಿ ಈ ಎಚ್ಚರಿಕೆಯನ್ನು ಸಿಬ್ಬಂದಿ ವರ್ಗವು ವಹಿಸಬೇಕಿದೆ.
ಕೆಎಸ್ಸಾರ್ಟಿಸಿ ಬಸ್‌ಗಳನ್ನು ರಸ್ತೆಗಿಳಿಸುವ ಬಗ್ಗೆ ನಗರದ ಬಿಜೈ ಬಸ್ ನಿಲ್ದಾಣದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ದೀರ್ಘ ದೂರ ಹಾಗೂ ಅಂತರ್ ಜಿಲ್ಲಾ ಮಾರ್ಗಗಳಲ್ಲಿ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲು ಸಿದ್ಧತೆಗೊಳಿಸಲಾಗಿದೆ. ಕೌಂಟರ್‌ನಲ್ಲಿ ಟಿಕೆಟ್ ವಿತರಿಸಲು ಹಾಗೂ ಪ್ರಯಾಣಿಕರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ದೀರ್ಘ ಮತ್ತು ಅಂತರ್ ಜಿಲ್ಲಾ ಮಾರ್ಗಗಳಲ್ಲಿ ಬಸ್ ಓಡಿಸಲು ಮೊದಲ ಆದ್ಯತೆ ನೀಡಲಾಗುತ್ತದೆ. ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಬಸ್ ಸಂಚಾರ ಆರಂಭವಾಗಲಿದೆ. ಸದ್ಯ ಎಷ್ಟು ಬಸ್‌ಗಳನ್ನು ರಸ್ತೆಗೆ ಇಳಿಸಲಾಗುತ್ತದೆ ಎಂದು ಹೇಳಲಾಗದು. ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿ ಅಗತ್ಯಕ್ಕೆ ತಕ್ಕಂತೆ ಬಸ್‌ಗಳನ್ನು ರಸ್ತೆಗೆ ಓಡಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗ ನಿಯಂತ್ರಕ ಅರುಣ್ ತಿಳಿಸಿದ್ದಾರೆ.





