ಮಂಗಳೂರು: ತಪಾಸಣಾ ಅಧಿಕಾರಿಗಳನ್ನೇ ಯಾಮಾರಿಸಿ ದಿಲ್ಲಿಯಿಂದ ಊರು ತಲುಪಿದ್ದ ಕೊರೋನ ಸೋಂಕಿತ !

ಮಂಗಳೂರು, ಮೇ 18: ಕೊರೋನ ಸೋಂಕಿಗೊಳಗಾಗಿರುವ ನಗರದ ಜೆಪ್ಪಿನಮೊಗರು ಗ್ರಾಮದ ಜೆಪ್ಪುಪಟ್ಣದ 31ರ ಹರೆಯದ ಯುವಕನ ‘ಟ್ರಾವೆಲ್ ಹಿಸ್ಟರಿ’ಯು ರೋಮಾಂಚನಕಾರಿಯಾಗಿದೆ.
ರವಿವಾರ ಸೋಂಕು ಪತ್ತೆಯಾದೊಡನೆ ಅಧಿಕಾರಿಗಳು ಈತನ ಟ್ರಾವೆಲ್ ಹಿಸ್ಟರಿ ಸಂಗ್ರಹಕ್ಕೆ ಮುಂದಾದಾಗ ಹಲವು ಅಂಶಗಳು ಬೆಳಕಿಗೆ ಬಂದಿವೆ.
ದುಬೈಯಲ್ಲಿದ್ದ ಈತ ಲಾಕ್‌ಡೌನ್‌ಗೆ ಮುನ್ನವೇ ಭಾರತಕ್ಕೆ ಆಗಮಿಸಿದ್ದ. ಅಂದರೆ ದಿಲ್ಲಿ ತಲುಪಿದ್ದ. ಅಲ್ಲಿಂದ ಊರಿಗೆ ಬರಬೇಕೆನ್ನುವಷ್ಟರಲ್ಲಿ ಲಾಕ್‌ಡೌನ್ ವಿಧಿಸಲ್ಪಟ್ಟಿತು. ಹಾಗಾಗಿ ದಿಲ್ಲಿಯಲ್ಲಿದ್ದ ತನ್ನ ಫ್ಲಾಟ್‌ನಲ್ಲೇ ಉಳಿದಿದ್ದ. ಈ ಮಧ್ಯೆ ಊರಿಗೆ ಬರಲು ಬಯಸಿದ ಆತ ಕಾಲ್ನಡಿಗೆ ಆರಂಭಿಸಿದ. ಹಾಗೇ ಸಿಕ್ಕ ಸಿಕ್ಕ ಕಾರು, ವ್ಯಾನ್, ಲಾರಿಗೆ ಕೈಯೊಡ್ಡಿ ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣ ಮುಂದುವರಿಸಿದ. ವಾಹನಗಳಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಗಡಿ ತಪಾಸಣಾ ಅಧಿಕಾರಿಗಳನ್ನೇ ಯಮಾರಿಸಿದ್ದ ಎನ್ನಲಾಗಿದೆ. ಅಂತೂ ಇಂತು ಬಂಟ್ವಾಳಕ್ಕೆ ತಲುಪಿದ ಈ ಯುವಕ ಆಟೊ ರಿಕ್ಷಾವೊಂದರಲ್ಲಿ ಜಪ್ಪುಪಟ್ಣಕ್ಕೆ ತಲುಪಿದ.
10 ದಿನಗಳ ಹಿಂದೆ ಮನೆಗೆ ಕಾಲಿಟ್ಟ ಮಗನನ್ನು ತಂದೆ-ತಾಯಿ ತಕ್ಷಣ ಒಳಗೆ ಸೇರಿಸಲಿಲ್ಲ. ‘ಕೊರೋನ ಟೆಸ್ಟ್ ಮಾಡಿಸಿಕೊಂಡು ಬಳಿಕ ಮನೆಗೆ ಬಾ’ ಎಂದು ಹೇಳಿದ್ದಾರೆ. ಆದರೆ ಇದನ್ನು ನಿರ್ಲಕ್ಷಿಸಿದ ಯುವಕ ಪಕ್ಕದಲ್ಲೇ ಇರುವ ಅಜ್ಜಿಯ ಮನೆಯಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ.
ಹೆತ್ತವರು ಮತ್ತೆಯೂ ಒತ್ತಡ ಹೇರಿದ್ದರಿಂದ ಯುವಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಕೋವಿಡ್ ತಪಾಸಣಾ ಕೇಂದ್ರಕ್ಕೆ ತೆರಳಿ ಪರೀಕ್ಷೆಗೆ ಒಳಗಾಗಿದ್ದ. ರವಿವಾರ ಬಂದ ವರದಿಯಲ್ಲಿ ಆತನಿಗೆ ಕೊರೋನ ಪಾಸಿಟಿವ್ ಇರುವುದು ದೃಢವಾಗಿದೆ.
ಈ ಯುವಕನಿಗೆ ಮದುವೆ ನಿಶ್ಚಯವಾಗಿದೆ ಎನ್ನಲಾಗಿದ್ದು, ಇದೇ ಕಾರಣಕ್ಕಾಗಿ ದಿಲ್ಲಿಯಿಂದ ಮಂಗಳೂರಿಗೆ ಬಂದಿದ್ದ ಎಂದು ಮೂಲಗಳು ತಿಳಿಸಿವೆ. ಯುವಕ ದಿಲ್ಲಿಯಿಂದ ಮನೆಗೆ ಬಂದು 10 ದಿನಗಳಾಗಿದ್ದು, ಈ ನಡುವೆ ಹಲವು ಸಂಬಂಧಿಕರನ್ನು ಸಂಪರ್ಕಿಸಿದ್ದಲ್ಲದೆ ಊರಿನಲ್ಲೂ ಸುತ್ತಾಡಿದ್ದಾನೆಂದು ತಿಳಿದುಬಂದಿದೆ.
ಈ ಯುವಕ ದಿಲ್ಲಿಯಿಂದ ನಾನಾ ವಾಹನಗಳ ಮೂಲಕ ಬಂದಿರುವುದಲ್ಲದೆ, ಬಂಟ್ವಾಳದ ಆಟೊ ರಿಕ್ಷಾ, ಜೆಪ್ಪು ಪಟ್ಣಪ್ರದೇಶ... ಹೀಗೆ ಈತನ ಟ್ರಾವೆಲ್ ಹಿಸ್ಟರಿ ಕಲೆ ಹಾಕುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.







