ಶಾಸಕ ಆರಗ ಹೇಳಿಕೆಗೆ ಮುಸ್ಲಿಂ ಒಕ್ಕೂಟ ಖಂಡನೆ
ತೀರ್ಥಹಳ್ಳಿ: ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರು ಇತ್ತೀಚಿಗೆ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಭಾಷಣ ಮಾಡಿರುವುದಲ್ಲದೆ, ನಮ್ಮ ಸಮುದಾಯದ ವಿರುದ್ಧ ತೀರಾ ಕೆಳಮಟ್ಟದಲ್ಲಿ ಮಾತನಾಡಿರುವುದು ನಮಗೆ ತುಂಬಾ ನೋವಾಗಿದೆ ಎಂದು ತೀರ್ಥಹಳ್ಳಿ ಜಮಾಅತ್ ಒಕ್ಕೂಟ ಖಂಡಿಸಿದೆ.
ಇತ್ತೀಚಿಗೆ ಉನ್ನತ ಅಧಿಕಾರಿಗಳ ಸಭೆಯಲ್ಲಿ ಸೌಲಭ್ಯಗಳ ಮಾಹಿತಿ ನೀಡುವ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡುತ್ತಾ ನಮ್ಮ ಸಮಾಜದ ವಿರುದ್ಧ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ. ಆದರೆ ವೈಯಕ್ತಿಕವಾಗಿ ನಡೆಯುವ ಅಚಾತುರ್ಯ ಮತ್ತು ಘಟನೆಗಳಿಗೆ ಸಮಾಜವೇ ಕಾರಣ ಎಂದು ಒಂದು ಸಮುದಾಯದ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ನಿಂದಿಸಿ, ಅವಮಾನಿಸಿರುವುದು ನಮಗೆ ತುಂಬಾ ನೋವಾಗಿದೆ ಎಂದು ಜಮಾಅತ್ ಒಕ್ಕೂಟ ತಿಳಿಸಿದೆ.
ಕೊರೋನ ವೈರಸ್ ತಡೆಯಲು ಭಾರತ ಸರ್ಕಾರ ಮೂರು ಹಂತದ ಲಾಕ್ ಡೌನ್ ಅನ್ನು ಘೋಷಿಸಿದೆ. ಜನತೆ, ಅಧಿಕಾರಿಗಳ ಮುಂಜಾಗ್ರತೆ ಮತ್ತು ಸಹಕಾರದ ಫಲವಾಗಿ ಈ ದೇಶದಲ್ಲಿ ವೈರಸ್ ತೀವ್ರತೆಯನ್ನು ಕಳೆದು ಕೊಂಡಿದೆ. ವಿಶೇಷವಾಗಿ ತೀರ್ಥ ಹಳ್ಳಿಯಲ್ಲಿ ಕೂಡಾ ನಮ್ಮ ಸಮುದಾಯ ಸಂಪೂರ್ಣವಾಗಿ ತಾಲೂಕು ಆಡಳಿತಕ್ಕೆ ಸಹಕಾರ ನೀಡಿದೆ ಎಂದು ತಿಳಿಸಿದ್ದಾರೆ.
ಮಾರ್ಚ್ 5 ರಂದು ದಾವಣಗೆರೆ ಯಿಂದ ಗುಜರಾತಿಗೆ ಧಾರ್ಮಿಕ ಪ್ರವಾಸಕ್ಕೆ ತೆರಳಿದ ಜಿಲ್ಲೆಯ 8 ಮಂದಿ ಮಾರ್ಚ್ 24ರಂದು ಲಾಕ್ ಡೌನ್ ಆದ ಕಾರಣ ಹಿಂದಿರುಗಲು ಸಾಧ್ಯವಾಗದೆ ಅಹಮದಬಾದ್ ನಲ್ಲಿ ಸಿಲುಕಿಕೊಂಡರು. ಸರ್ಕಾರಿ ಇಲಾಖೆಗೆ ತಮ್ಮ ಇರುವಿಕೆ ಕಾರಣವನ್ನು ನೀಡಿ ಅಹ್ಮದಾಬಾದ್‌ನಲ್ಲಿ ಸರ್ಕಾರಿ ಕ್ವಾರಂಟೈನ್‌ಗೆ ಒಳಪಟ್ಟು ಕೋವಿಡ್19 ವೈದ್ಯಕೀಯ ತಪಾಸಣೆಗೆ ಒಳಗಾದರು. ಬಳಿಕ ಕೋವಿಡ್19 ವರದಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಮೂರನೆ ಲಾಕ್ ಡೌನ್ ಸಡಿಲ ಆದಾಗ ಸರಕಾರದ ಅನುಮತಿ ಪಡೆದು ವಾಪಸ್ ಬಂದ ತೀರ್ಥಹಳ್ಳಿ ಕೋಣಂದೂರಿನ 8 ಮಂದಿ ಶಿವಮೊಗ್ಗದಲ್ಲಿ ಕ್ವಾರಂಟೈನ್ ಆಗಿದ್ದಾರೆ. ಇದು ಶಾಸಕರ ಗಮನಕ್ಕೆ ಬಂದಂತಹ ವಿಚಾರ. ಆದರೆ ತಾವು ಹೇಳಿದ ಹಾಗೆ ಇವರು ಎಲ್ಲೂ ಸಹ ತಪ್ಪಿಸಿಕೊಂಡು ಹೋದವರಲ್ಲ. ಸರ್ಕಾರಿ ಕ್ವಾರಂಟೈನ್ ಒಳಗಾಗಿದ್ದಾರೆ. ಆದರೆ ಇಂತಹ ಸಂದರ್ಭದಲ್ಲೂ ಏನಾದರೂ ವ್ಯತ್ಯಾಸ ಬಂದಿದ್ದರೆ ಅದಕ್ಕೆ ಅವರೇ ಹೊಣೆ ಹೊರತು ಸಮುದಾಯ ಹೊಣೆ ಆಗುವುದು ಹೇಗೆ? ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಇಂದಿನ ಸಮಸ್ಯೆಗೆ ನಮ್ಮ ಸಮಾಜವೇ ಕಾರಣ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದೀರಿ ಎಂದು ಜಮಾಅತ್ ಒಕ್ಕೂಟ ಆರೋಪಿಸಿದೆ.
ನಮ್ಮ ಸಮಾಜವು ಸಹ ಈ ದೇಶದ ಒಂದು ಭಾಗ. ಎಲ್ಲರಂತೆ ನೂರಾರು ವರ್ಷಗಳಿಂದ ಈ ದೇಶದಲ್ಲಿ ಬಂದಿದ್ದೇವೆ. ದೇಶ, ಸಮಾಜದ ರಕ್ಷಣೆಯಲ್ಲಿ ನಮ್ಮ ಸಮಾಜ ದುಡಿದಿದೆ, ದುಡಿಯುತ್ತಿದೆ. ಆದರೆ ಎಲ್ಲೋ ನಡೆಯುವ ಘಟನೆಗಳಿಗೆ ಒಂದು ಸಮಾಜವನ್ನು ಗುರಿಮಾಡುವುದು, ಅದರಲ್ಲೂ ದೇಶದ ಎಲ್ಲಾ ಸಮಾಜದ ಹಿತ ಕಾಯುವುದಾಗಿ ಅಧಿಕಾರಕ್ಕೆ ಬಂದ ಜನ ಪ್ರತಿನಿಧಿಗಳು ಎರಡು ಸಮುದಾಯದ ಮಧ್ಯೆ ವೈಮನಸ್ಸು ಸೃಷ್ಟಿ ಮಾಡಿ ಕಂದಕ ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಕದಡುವಂತೆ ಪ್ರಚೋದನಾತ್ಮಕ ಹೇಳಿಕೆಗಳು ನಿಜವಾಗಿಯೂ ಉತ್ತಮ ಬೆಳವಣಿಗೆ ಅಲ್ಲ. ನಿಮ್ಮಿಂದ ಇಂತಹ ಮಾತುಗಳನ್ನು ನಾವು ಎಂದು ಊಹಿಸಿರಲಿಲ್ಲ. ವೈಯಕ್ತಿಕ ಘಟನೆಗಳನ್ನು, ತಪ್ಪುಗಳನ್ನು ದಯಮಾಡಿ ಹೊಣೆ ಮಾಡಬೇಡಿ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ, ಆ ಅಧಿಕಾರ ಸರ್ಕಾರಕ್ಕೆ ಇದೆ. ನಮಗೆ ಅರಿವಿದೆ, ಆದರೆ ಸಾಮರಸ್ಯದಿಂದ ಇರುವ ಸಮಾಜಗಳ ನಡುವೆ ತಮ್ಮ ಹೇಳಿಕೆ ಕಂದಕ ಸೃಷ್ಟಿ ಮಾಡುವುದಂತೂ ಸುಳ್ಳಲ್ಲ ಎಂದು ಜಮಾಅತ್ ಒಕ್ಕೂಟದ ಅಧ್ಯಕ್ಷ ನಾಸಿರ್ ಖಾನ್ ಪತ್ರಿಕಾ ಪ್ರಕಟನೆಯ ಮೂಲಕ ಖಂಡಿಸಿದ್ದಾರೆ.







