ಭಾರತದಲ್ಲಿ ಲಕ್ಷದ ಗಡಿ ದಾಟಿದ ಕೊರೋನ ಸೋಂಕು
ಹೊಸದಿಲ್ಲಿ, ಮೇ 19: ಭಾರತದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಸೋಮವಾರ ಒಂದು ಲಕ್ಷವನ್ನು ಮೀರಿದೆ. ಅಂತೆಯೇ ಈ ಮಾರಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮೂರು ಸಾವಿರವನ್ನು ದಾಟಿದೆ. ದೇಶದಲ್ಲಿ ವೈರಸ್ ಸೋಂಕು ದ್ವಿಗುಣಗೊಳ್ಳಲು ಬೇಕಾಗುವ ಅವಧಿ 12 ದಿನಗಳ ಆಸುಪಾಸಿನಲ್ಲಿದೆ. ಸೋಂಕಿನ ಗತಿ ಹಾಗೂ ಸಾವಿನ ಪ್ರಮಾಣ ಎರಡೂ ದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸೋಮವಾರ ಒಟ್ಟು 4,713 ಪ್ರಕರಣಗಳು ದೇಶಾದ್ಯಂತ ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ ಸತತ ಎರಡನೇ ದಿನ 2000ಕ್ಕಿಂತ ಹೆಚ್ಚು (2033) ಪ್ರಕರಣಗಳು ಪತ್ತೆಯಾಗಿವೆ. ದೇಶದ 24 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಮವಾರ ಹೊಸ ಪ್ರಕರಣಗಳು ವರದಿಯಾಗಿವೆ.
ಧನಾತ್ಮಕ ಅಂಶವೆಂದರೆ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆಯೂ ನಿಧಾನವಾಗಿ ಹೆಚ್ಚುತ್ತಿದ್ದು, 38,908 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅಂದರೆ ಭಾರತದಲ್ಲಿ ಗುಣಮುಖರಾದವರ ಪ್ರಮಾಣ ಒಟ್ಟು ಸೋಂಕಿತರ ಶೇಕಡ 38.8ರಷ್ಟಿದೆ. 3,103 ಮಂದಿ ಮೃತಪಟ್ಟಿದ್ದು, ಮರಣ ದರ ಶೇಕಡ 3.1ರಷ್ಟಿದೆ.
ದೇಶದಲ್ಲಿ ನಾಲ್ಕನೇ ಹಂತದ ಲಾಕ್ಡೌನ್ ಆರಂಭವಾಗಿದ್ದರೂ, ಪ್ರಕರಣಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಇದು ದೇಶದಲ್ಲಿ ಸೋಂಕಿನ ಪ್ರಮಾಣ ಇನ್ನೂ ಗರಿಷ್ಠಮಟ್ಟವನ್ನು ತಲುಪಿಲ್ಲ ಎನ್ನುವುದರ ಸೂಚಕವಾಗಿದೆ. ಮಹಾರಾಷ್ಟ್ರ ಹೊರತುಪಡಿಸಿ ಸೋಮವಾರ ತಮಿಳುನಾಡು (536), ಗುಜರಾತ್ (336), ದಿಲ್ಲಿ (299), ಮಧ್ಯಪ್ರದೇಶ (254), ಉತ್ತರ ಪ್ರದೇಶ (177) ಮತ್ತು ಬಿಹಾರ (103) ರಾಜ್ಯಗಳಲ್ಲೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ರಾಜಸ್ಥಾನ (305) ಮತ್ತು ಕರ್ನಾಟಕ (99) ಸೋಮವಾರ ಇದುವರೆಗಿನ ಗರಿಷ್ಠ ಪ್ರಕರಣಗಳು ದಾಖಲಾಗಿವೆ.
ಸೋಮವಾರ 131 ಮಂದಿ ಸೋಂಕಿತರು ಮೃತಪಟ್ಟಿದ್ದು, ಸತತ ನಾಲ್ಕು ದಿನಗಳಲ್ಲಿ ಸಾವಿನ ಸಂಖ್ಯೆ ಮೂರಂಕಿಯಲ್ಲಿ ಮುಂದುವರಿದಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ (51) ಸಾವು ಸಂಭವಿಸಿದ್ದು, ಗುಜರಾತ್ನಲ್ಲಿ 35, ದಿಲ್ಲಿಯಲ್ಲಿ 12 ಮಂದಿ ಸಾವಿಗೀಡಾಗಿದ್ದಾರೆ. ಭಾರತದ ಪ್ರಮುಖ ನಗರಗಳ ಪೈಕಿ ಮುಂಬೈ ಗರಿಷ್ಠ (757) ಸಾವು ಕಂಡಿದ್ದರೆ, 524 ಮಂದಿ ಮೃತಪಟ್ಟಿರುವ ಅಹ್ಮದಾಬಾದ್ ಎರಡನೇ ಸ್ಥಾನದಲ್ಲಿದೆ. ಒಟ್ಟು ಸೋಂಕಿತರ ಪೈಕಿ ಸಾವಿನ ಪ್ರಮಾಣ ಮುಂಬೈನಲ್ಲಿ 3.64% ಇದ್ದರೆ ಗುಜರಾತ್ನಲ್ಲಿ 6.95% ಇದೆ.