ರಾಜ್ಯದಲ್ಲಿ ಮತ್ತೆ 127 ಮಂದಿಯಲ್ಲಿ ಕೊರೋನ ಸೋಂಕು ದೃಢ, ಮೂವರು ಬಲಿ
ಮಂಡ್ಯದಲ್ಲಿ ಅತ್ಯಧಿಕ 61 ಪ್ರಕರಣಗಳು ಪತ್ತೆ, ಒಟ್ಟು ಸಂಖ್ಯೆ 1,373ಕ್ಕೆ ಏರಿಕೆ

ಬೆಂಗಳೂರು, ಮೇ 19: ರಾಜ್ಯದಲ್ಲಿ ಮತ್ತೆ ಅತ್ಯಧಿಕ ಅಂದರೆ 127 ಮಂದಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದರಿಂದ ಸೋಂಕಿತರ ಒಟ್ಟು ಸಂಖ್ಯೆ 1373ಕ್ಕೆ ಏರಿಕೆಯಾಗಿದೆ. ಈ ನಡುವೆ ಕಳೆದೆರಡು ದಿನಗಳಲ್ಲಿ ಸೋಂಕಿಗೊಳಗಾದ ಮೂವರು ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಲೆಟಿನ್ ತಿಳಿಸಿದೆ.
ಸೋಮವಾರ ಸಂಜೆ 5ರಿಂದ ಇಂದು ಮಧ್ಯಾಹ್ನ 12 ಗಂಟೆಯ ಅವಧಿಯಲ್ಲಿ 127 ಮಂದಿಯಲ್ಲಿ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಮಂಡ್ಯ ಜಿಲ್ಲೆಯೊಂದರಲ್ಲೇ ಇಂದು 61 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ 19 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 12, ಕಲಬುರಗಿ ಜಿಲ್ಲೆಯಲ್ಲಿ ಇಂದು 11 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು ಐದು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ನಾಲ್ಕು, ಚಿಕ್ಕಮಗಳೂರು 2, ಹಾಸನದಲ್ಲಿ 3, ವಿಜಯಪುರ ಮತ್ತು ಯಾದಗಿರಿ, ಗದಗ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ ಒಂದೊಂದು ಸೋಂಕು ಪ್ರಕರಣಗಳು ದೃಢಪಟ್ಟಿದೆ.
ಮೂವರು ಬಲಿ
ಬಳ್ಳಾರಿಯಲ್ಲಿ ಕೊರೋನ ಸೋಂಕು ದೃಢಪಟ್ಟಿರುವ 61 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಇವರು ಬೆಂಗಳೂರಿಗೆ ಪ್ರಯಾಣಿಸಿದ ಇತಿಹಾಸ ಹೊಂದಿದ್ದರು.
ಇನ್ನೊಂದು ಪ್ರಕರಣದಲ್ಲಿ ವಿಜಯಪುರದ 65 ವರ್ಷದ ವ್ಯಕ್ತಿಯೊಬ್ಬರು ಮೇ 18ರಂದು ಮೃತಪಟ್ಟಿದ್ದು, ಅವರಲ್ಲಿ ಕೊರೋನ ಸೋಂಕು ದೃಢಪಟ್ಟಿತ್ತು.
ಮೂರನೇ ಪ್ರಕರಣದಲ್ಲಿ ಬೆಂಗಳೂರಿನ 54 ವರ್ಷದ ವ್ಯಕ್ತಿಯೊಬ್ಬರು ಕೊರೋನ ಸೋಂಕಿನಿಂದ ಮೇ 18ರಂದು ಕೊನೆಯುಸಿರೆಳೆದಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.
ರಾಜ್ಯದ ಒಟ್ಟು ಸೋಂಕಿತರ ಪೈಕಿ 530 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ 40 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.