ಬೆಂಗಳೂರಿನಿಂದ ಬಿಹಾರಕ್ಕೆ ಶ್ರಮಿಕ್ ರೈಲಿನಲ್ಲಿ ತಲುಪಿದ್ದ 9 ಕಾರ್ಮಿಕರು ರಸ್ತೆ ಅಪಘಾತಕ್ಕೆ ಬಲಿ
ಪಾಟ್ನಾ ಮೇ 19: ಭಾಗಲ್ಪುರ ಜಿಲ್ಲೆಯ ನೌಗಾಚಿಯ ಪಟ್ಟಣದಲ್ಲಿ ವಲಸಿಗ ಕಾರ್ಮಿಕರು ತೆರಳುತ್ತಿದ್ದ ಟ್ರಕ್ ಮತ್ತೊಂದು ವಾಹನಕ್ಕೆ ಢಿಕ್ಕಿಯಾದ ಪರಿಣಾಮ 9 ಕಾರ್ಮಿಕರು ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಬೆಂಗಳೂರಿನಿಂದ ಶ್ರಮಿಕ್ ರೈಲಿನಲ್ಲಿ ಬಂದಿಳಿದ 15 ಕಾರ್ಮಿಕರು ಟ್ರಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಶ್ರಮಿಕ್ ವಿಶೇಷ ರೈಲಿನಿಂದ ಬೆಂಗಳೂರಿನಿಂದ ಬಿಹಾರಕ್ಕೆ ಬಂದ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ವ್ಯವಸ್ಥೆಗೆ ಒಳಪಡಿಸಲು ರಾಜ್ಯಸರ್ಕಾರ ಯಾವುದೇ ಸಾರಿಗೆ ವ್ಯವಸ್ಥೆ ಮಾಡದಿರುವುದು ಈ ಘಟನೆಯಿಂದ ಸಾಬೀತಾಗಿದೆ.ಬೆಳಗ್ಗಿನ ಜಾವ 2 ಗಂಟೆಗೆ ಎನ್ಎಚ್-31ರಲ್ಲಿ ಖಾರಿಕ್ ಎಂಬಲ್ಲಿ ಟ್ರಕ್ ಬಸ್ಸಿಗೆ ಮುಖಾಮುಖಿ ಢಿಕ್ಕಿಯಾಗಿದೆ.
ಬಸ್ಸಿನಲ್ಲಿ ಕೇವಲ 4 ಪ್ರಯಾಣಿಕರಿದ್ದರು.ಅವರಿಗೆ ಸ್ವಲ್ಪ ಗಾಯವಾಗಿದೆ. ನಿಯಂತ್ರಣ ಕಳೆದುಕೊಂಡ ಟ್ರಕ್ ಮಗುಚಿ ಬಿದ್ದ ಪರಿಣಾಮ 9 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಈ ತನಕ ಮೃತಪಟ್ಟಿರುವ ಕಾರ್ಮಿಕರ ಗುರುತು ಪತ್ತೆ ಹಚ್ಚಿಲ್ಲ. ಮೃತದೇಹಗಳನ್ನು ನೌಗಚಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.