ಟಿಪ್ಪು ಜಯಂತಿ: ಬಿಜೆಪಿ, ಸಂಘಪರಿವಾರ ನಾಯಕರ ವಿರುದ್ಧದ ಪ್ರಕರಣ ಕೈಬಿಡಲು ರಾಜ್ಯ ಸರಕಾರದ ಶಿಫಾರಸು
'ಪ್ರಕರಣ ವಾಪಸ್ ಪಡೆಯಲು ಅಸಾಧ್ಯ’ ಎಂದ ಡಿಜಿಪಿ

ಬೆಂಗಳೂರು: ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಸೃಷ್ಟಿಯಾಗಿದ್ದ ವಿವಾದದ ನಂತರ 2014ರಿಂದ 2018ರ ನಡುವೆ ನಡೆದಿದ್ದ ಹಿಂಸಾತ್ಮಕ ಘಟನೆಗಳಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪ ಹೊತ್ತ ಹಲವು ಬಿಜೆಪಿ ನಾಯಕರು, ವಿಹಿಂಪ ನಾಯಕರು ಹಾಗೂ ಸಂಘಪರಿವಾರಕ್ಕೆ ಸೇರಿದವರ ವಿರುದ್ಧ ದಾಖಲಾಗಿದ್ದ 46 ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯದ ಬಿ ಎಸ್ ಯಡಿಯೂರಪ್ಪ ಸರಕಾರ ಶಿಫಾರಸು ಮಾಡಿದೆ. ಆದರೆ ಈ ಪ್ರಕರಣಗಳನ್ನು ಹಿಂಪಡೆಯಲು ಸಾಧ್ಯವಿಲ್ಲ ರಾಜ್ಯ ಡಿಜಿಪಿ ಪ್ರತಿಕ್ರಿಯಿಸಿದ್ದಾರೆ ಎಂದು thewire.in ವರದಿ ಮಾಡಿದೆ.
ಹಿಂದಿನ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರ ಅಧಿಕಾರದಲ್ಲಿದ್ದ ಸಂದರ್ಭ ರಾಜ್ಯದ ವಿವಿಧೆಡೆ ಈ ಹಿಂಸಾತ್ಮಕ ಘಟನೆಗಳು ನಡೆದಿದ್ದವು.
ಮಾರ್ಚ್ 5ರಂದು ಈ ಶಿಫಾರಸನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರ ಅನುಮೋದನೆಯೊಂದಿಗೆ ಮಾಡಲಾಗಿದ್ದು, ಇದಕ್ಕೆ ರಾಜ್ಯ ಪೊಲೀಸ್ ಇಲಾಖೆ ಹಾಗೂ ಕಾನೂನು ಇಲಾಖೆ ತಾತ್ವಿಕವಾಗಿ ವಿರೋಧ ವ್ಯಕ್ತಪಡಿಸಿವೆ.
ಹಿರಿಯ ಬಿಜೆಪಿ ನಾಯಕ ಸಂಜಯ್ ಪಾಟೀಲ್, ವಿಹಿಂಪ ನಾಯಕ ಸ್ವರೂಪ್ ಕಲ್ಕುಂದ್ರಿ ಹಾಗು ಹಲವಾರು ಜಿಲ್ಲಾ ಮಟ್ಟದ ಬಜರಂಗದಳದ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ಶಿಫಾರಸು ಮಾಡಲಾಗಿದೆ. ಆರೋಪಿಗಳು ಹಿಂಸೆಯಲ್ಲಿ ನೇರ ಶಾಮೀಲಾತಿಯೊಂದಿಗೆ ರಾಜ್ಯದಲ್ಲಿ ಮತೀಯ ಉದ್ವಿಗ್ನತೆ ಸೃಷ್ಟಿಸಲು, ಪ್ರಚೋದನಕಾರಿ ಭಾಷಣ ಹಾಗೂ ಟಿಪ್ಪು ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಹಾಗೂ ಆಗಿನ ಮುಖ್ಯಮಂತ್ರಿಯನ್ನು ಅಣಕಿಸುವಂತೆ ಭಾಷಣ ಮಾಡಿದ ಆರೋಪ ಸೇರಿದಂತೆ ಹಲವು ಆರೋಪ ಎದುರಿಸುತ್ತಿದ್ದಾರೆ.
ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 321 ಅನ್ವಯ ಈ ಪ್ರಕರಣಗಳನ್ನು ವಾಪಸ್ ಪಡೆಯಲು ಶಿಫಾರಸು ಮಾಡಲಾಗಿದೆ. ಈ ಪ್ರಕರಣಗಳನ್ನು ವಾಪಸ್ ಪಡೆಯಲು ಸಾಧ್ಯವಿಲ್ಲವೆಂದು ಡಿಜಿ ಹಾಗೂ ಐಜಿಪಿ ಅಭಿಪ್ರಾಯಪಟ್ಟಿದ್ದರೆ, ಕಾನೂನು ಮತ್ತು ಪ್ರಾಸಿಕ್ಯೂಶನ್ ಇಲಾಖೆ ಈ ಪ್ರಕರಣಗಳು ವಾಪಸ್ ಪಡೆಯಲು ಯೋಗ್ಯವಲ್ಲ ಎಂದು ಅಭಿಪ್ರಾಯಪಟ್ಟಿದೆ. ರಾಜ್ಯ ಡಿಜಿ ಹಾಗೂ ಐಜಿಪಿ ಅದೇ ಸಮಯ ಇಂತಹ ಶಿಫಾರಸುಗಳು ‘ಸಾಮಾನ್ಯ ಪ್ರಕ್ರಿಯೆ' ಎಂದಿದ್ದಾರೆ.
“ಇಂತಹ ಪ್ರಸ್ತಾವಗಳು ನಮ್ಮ ಇಲಾಖೆಗೆ ಬರುತ್ತಲೇ ಇರುತ್ತವೆ. ಪ್ರತಿದಿನ ಅರ್ಜಿಗಳನ್ನು ಸಲ್ಲಿಸಲಾಗುತ್ತದೆ. ತಮ್ಮ ವಿವೇಚನೆಯನ್ನು ಬಳಸಿ ಈ ಪ್ರಕರಣಗಳು ಹಿಂಪಡೆಯುವಂತಹದ್ದಲ್ಲ ಎನ್ನುವುದನ್ನು ಪ್ರಕರಣದ ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ” ಎಂದವರು ತಿಳಿಸಿದ್ದಾರೆ.
ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 321 ಅನ್ವಯ ಈ ಶಿಫಾರಸುಗಳನ್ನು ನ್ಯಾಯಾಲಯದ ಮುಂದೆ ಇರಿಸಬೇಕಾಗಿದ್ದು , ಪ್ರಕರಣಗಳ ಅರ್ಹತೆಯ ಆಧಾರದಲ್ಲಿ ಹಾಗೂ ಸರಕಾರದ ನಿಲುವಿನ ಆಧಾರದಲ್ಲಿ ನ್ಯಾಯಾಲಯ ತನ್ನ ವಿವೇಚನೆಯಂತೆ ನಿರ್ಧಾರ ಪ್ರಕಟಿಸುತ್ತದೆ.