ಬಿಎಂಟಿಸಿ: ಟಿಕೆಟ್ ಇಲ್ಲ, ಪಾಸ್ ಇದ್ದವರಿಗೆ ಮಾತ್ರ ಪ್ರಯಾಣ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 18: ಬಿಎಂಟಿಸಿ ಬಸ್ಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾಸಿಕ ಪಾಸು, ವಾರದ ಪಾಸು ಇಲ್ಲವೆ ದೈನಂದಿನ ಪಾಸುಗಳನ್ನು ಹೊಂದಿರುವವರಿಗೆ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗಸೂಚಿಯಂತೆ ಬಿಎಂಟಿಸಿ ಬಸ್ಸುಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದ್ದು, ಕೋವಿಡ್-19ರ ಹಿನ್ನೆಲೆಯಲ್ಲಿ ಪ್ರಯಾಣಿಕರು, ಬಸ್ ಚಾಲಕರು, ನಿರ್ವಾಹಕರು ಕಡ್ಡಾಯವಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕೆಂದು ಬಿಎಂಟಿಸಿ ಸೂಚಿಸಿದೆ.
ಸಾರಿಗೆ ಸೇವೆಗಳ ಲಭ್ಯತೆ: ಪ್ರಥಮ ಹಂತದಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಪ್ರಯಾಣಿಕರ ದಟ್ಟಣೆ ಇರುವಂತಹ ಪ್ರಮುಖ ಮಾರ್ಗಗಳಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ 7ಗಂಟೆಯಿಂದ ಪ್ರಾರಂಭಗೊಂಡು ಸಂಜೆ 5ರವರೆಗೆ ಮಾತ್ರ ಬಸ್ಗಳ ಸಂಚಾರ ಇರುತ್ತವೆ.
ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಸದ್ಯಕ್ಕೆ ಟಿಕೆಟ್ ವ್ಯವಸ್ಥೆ ಕಲ್ಪಿಸಿರುವುದಿಲ್ಲ. ಮಾಸಿಕ, ವಾರ ಹಾಗೂ ದೈನಂದಿನ ಪಾಸ್ಗಳನ್ನು ಪಡೆದು ಪ್ರಯಾಣಿಸಬೇಕಾಗುತ್ತದೆ. ಇದೇ ಮೊದಲ ಬಾರಿಗೆ 300ರೂ. ಮುಖಬೆಲೆಯ ವಾರದ ಪಾಸುಗಳನ್ನು ಪರಿಚಯಿಸಲಾಗಿದೆ.
ಬಸ್ ಪಾಸ್ಗಳು ಬಿಎಂಟಿಸಿ ಸಂಸ್ಥೆಯ ಎಲ್ಲ ಸಾಮಾನ್ಯ ಸೇವೆಗಳಲ್ಲಿ ಮಾನ್ಯತೆ ಹೊಂದಿರುತ್ತದೆ. ದೈನಂದಿನ ಪಾಸ್ಗಳನ್ನು 70ರೂ. ನೀಡಿ ಬಸ್ನ ನಿರ್ವಾಹಕರ ಬಳಿಯೇ ಪಡೆಯಬಹುದು. ವಾರದ ಪಾಸ್ ಹಾಗೂ ಮಾಸಿಕ ಪಾಸ್ ನಗರದ ಎಲ್ಲ ಬಸ್ ನಿಲ್ದಾಣಗಳಲ್ಲಿ ಲಭ್ಯ ಇರುತ್ತದೆ. ಈ ಪಾಸ್ಗಳನ್ನು ಹೊರತು ಪಡಿಸಿ ಇತರೆ ಬಸ್ ಪಾಸುಗಳನ್ನು ಹೊಂದಿರುವವರಿಗೆ ಬಸ್ನಲ್ಲಿ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲವೆಂದು ಬಿಎಂಟಿಸಿ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದೆ.
-ಸಾರಿಗೆ ಬಸ್ಗಳ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಮುನ್ನ ದೇಹದ ಉಷ್ಣಾಂಶವನ್ನು ಪರೀಕ್ಷಿಸುವುದು ಕಡ್ಡಾಯ. ಕರ್ತವ್ಯ ನಿರ್ವಹಿಸುವಾಗ ಮುಖಕ್ಕೆ ಮಾಸ್ಕ್ ಧರಿಸುವುದು ಹಾಗೂ ಪ್ರಯಾಣಿಕರು ನಡುವೆ ಅಂತರ ಕಾಪಾಡಿಕೊಳ್ಳಬೇಕು. ಬಸ್ಗಳಲ್ಲಿ ಸೀಟು ಖಾಲಿಯಿದ್ದಾಗ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು.
-ಪ್ರಯಾಣಿಕರು ಮೂಗು, ಬಾಯಿ ಮುಚ್ಚಿಕೊಳ್ಳುವಂತೆ ಬಟ್ಟೆ ಅಥವಾ ಮುಖಗವಸು ಕಡ್ಡಾಯವಾಗಿ ಧರಿಸಬೇಕು. ಬಸ್ನ ಹಿಂದಿನ ಬಾಗಿಲ ಮೂಲಕ ಹತ್ತಬೇಕು, ಮುಂದಿನ ಬಾಗಿಲ ಮೂಲಕ ಇಳಿಯಬೇಕು. ಹಾಗೂ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಸರತಿ ಸಾಲಿನಲ್ಲಿ ಬಸ್ಸನ್ನು ಹತ್ತುವುದು, ಇಳಿಯುವುದು ಮಾಡಬೇಕು.
-ಪ್ರಯಾಣಿಕರ ಆಸನಗಳು ಭರ್ತಿಯಾಗಿದ್ದಲ್ಲಿ ಬಸ್ಸನ್ನು ಹತ್ತಬಾರದು. ಮುಂದಿನ ಬಸ್ಸಿಗಾಗಿ ಕಾಯಬೇಕು. ಜ್ವರ ಹಾಗೂ ಖಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಹಿರಿಯ ನಾಗರಿಕರು, ಗರ್ಭಿಣಿಯರು, 10ವರ್ಷದ ಒಳಗಿನ ಮಕ್ಕಳಿಗೆ ಬಸ್ಸಿನಲ್ಲಿ ಪ್ರವೇಶವಿಲ್ಲ.