ಸಂವಿಧಾನ ಪೀಠಿಕೆ ಓದಿ ಅಧಿಕಾರ ಸ್ವೀಕರಿಸುತ್ತೇನೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
"ಕರ್ಫ್ಯೂ ಇರುವುದರಿಂದ ಮೇ 31ರಂದು ಪದಗ್ರಹಣ ಕಾರ್ಯಕ್ರಮ ಇಲ್ಲ"

ಬೆಂಗಳೂರು, ಮೇ 19: ಕಾಂಗ್ರೆಸ್ ಪಕ್ಷ ನನ್ನನ್ನು ರಾಜ್ಯಾಧ್ಯಕ್ಷನಾಗಿ ನೇಮಿಸಿದೆ. ನಮ್ಮಲ್ಲಿ ಸಾಂಕೇತಿಕವಾಗಿ ಪದಗ್ರಹಣ ಮಾಡುವುದಿದೆ. ಕೋವಿಡ್‍ನಿಂದಾಗಿ ನಮಗೆ ಆ ಭಾಗ್ಯ ಸಿಕ್ಕಿರಲಿಲ್ಲ. ಸಾಂಕೇತಿಕವಾಗಿ ಮಾಡಲಿಲ್ಲ ಅಂತ ಮನೆಯಲ್ಲಿ ಕೂರಲಿಲ್ಲ. ನಾವು ರಸ್ತೆಗಿಳಿದು ಪ್ರತಿಪಕ್ಷವಾಗಿ ವರ್ತಿಸಿದ್ದೇವೆ. ಜನರ ಮಧ್ಯೆ ಇದ್ದು ಪ್ರಾಮಾಣಿಕ ಸೇವೆ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರ ಜೊತೆ ಸೇರಿ ಸರಕಾರವನ್ನು ಎಚ್ಚರಿಸಿದ್ದೇವೆ. ಸಂಘ ಸಂಸ್ಥೆಗಳನ್ನ ಸೇರಿಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ ಎಂದರು.
ಈಗ ಸಾಂಕೇತಿಕವಾಗಿ ಪದಗ್ರಹಣ ಮಾಡಬೇಕಿದೆ. ಮೇ 31 ರಂದು ಕಾರ್ಯಕ್ರಮ ಮಾಡಬೇಕಿತ್ತು. ಆದರೆ, ಅಂದು ರವಿವಾರವಾದ್ದರಿಂದ ಸರಕಾರ ಕರ್ಫ್ಯೂ ಘೋಷಿಸಿದೆ. ಹೀಗಾಗಿ ನಾನು ಬೇರೊಂದು ದಿನ ಅಧಿಕಾರ ಸ್ವೀಕರಿಸುತ್ತೇನೆ ಎಂದು ಶಿವಕುಮಾರ್ ಹೇಳಿದರು.
ಅಧಿಕಾರ ಸ್ವೀಕರಿಸುವ ದಿನ ಗ್ರಾಪಂ, ವಾರ್ಡ್ ಮಟ್ಟದಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸಿ, ರಾಜ್ಯದ ಉದ್ದಗಲಕ್ಕೂ ಜ್ಯೋತಿ ಹಚ್ಚುವ ಕಾರ್ಯಕ್ರಮ ಮಾಡುತ್ತೇವೆ. ಸಂವಿಧಾನ ಪೀಠಿಕೆ ಓದಿ ಅಧಿಕಾರ ಸ್ವೀಕರಿಸುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.