ನಿಖಿಲ್ ವಿವಾಹ: ನಿಯಮ ಉಲ್ಲಂಘಿಸಿದ ಅಧಿಕಾರಿಗಳ ನಡೆಗೆ ಹೈಕೋರ್ಟ್ ಅಸಮಾಧಾನ
ಬೆಂಗಳೂರು, ಮೇ 19: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ವಿವಾಹದ ವೇಳೆ ವಾಹನ ಪಾಸ್ಗಳನ್ನು ವಿತರಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಲಾಕ್ಡೌನ್ ನಿಯಮ ಉಲ್ಲಂಘಿಸಿ ತಪ್ಪು ಮಾಡಿರುವ ಅಧಿಕಾರಿಗಳ ನಡೆಯನ್ನು ಸಮರ್ಥಿಸುವಂತಿದೆ ಎನ್ನುವ ಮೂಲಕ ಹೈಕೋರ್ಟ್ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಸರಕಾರದ ಹೆಚ್ಚುವರಿ ವಕೀಲ ವಿಕ್ರಂ ಹುಯಿಲಗೋಳ ಪ್ರಮಾಣ ಪತ್ರ ಸಲ್ಲಿಸಿ, ಕುಟುಂಬದ 100 ಸದಸ್ಯರ ಪಾಲ್ಗೊಳ್ಳುವಿಕೆಗೆ ಕುಮಾರಸ್ವಾಮಿ ಅನುಮತಿ ಕೋರಿದ್ದರು. ಇದನ್ನು ಆಧರಿಸಿ ಅನುಮತಿ ನೀಡಲಾಗಿತ್ತು ಎಂದು ತಿಳಿಸಿದರು.
ಪ್ರಮಾಣ ಪತ್ರ ಪರಿಶೀಲಿಸಿದ ನ್ಯಾಯಪೀಠ, ಪ್ರಕರಣ ಕೋರ್ಟ್ ಮೆಟ್ಟಿಲೇರಿದ ನಂತರ ಅನುಮತಿ ಪತ್ರ ಪಡೆದಂತಿದೆ ಎಂದು ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು. ಕೋರ್ಟ್ ನಿರ್ದೇಶನ ನೀಡಿದರೂ ಸರಕಾರ ಸಮರ್ಪಕ ಮಾಹಿತಿ ನೀಡಿಲ್ಲ. ನೀಡಿರುವ ಮಾಹಿತಿಗಳಲ್ಲೂ ಸಾಕಷ್ಟು ಗೊಂದಲಗಳಿವೆ. ಇದು ಗಂಭೀರ ಲೋಪ ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.