ಬೈಕಂಪಾಡಿ ಮಾರುಕಟ್ಟೆ ಅವ್ಯವಸ್ಥೆ ಸರಿಪಡಿಸಲು ಎಫ್‌ಐಟಿಯು ಮನವಿ
ಮಂಗಳೂರು, ಮೇ 19: ನಗರದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರ ಗೊಳಿಸಿದ ಬೆನ್ನಿಗೆ ಅಲ್ಲಿನ ಅವ್ಯವಸ್ಥೆಯು ಮೊದಲ ಮಳೆಗೆ ಬೆಳಕಿಗೆ ಬಂದಿದೆ.
ಕೋವಿಡ್-19 ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭ ಈಗಿರುವ ಮಾರುಕಟ್ಟೆಯ ವಿನ್ಯಾಸ ಮತ್ತು ರಚನೆ ಸೂಕ್ತವಾಗಿಲ್ಲ ಎಂದು ಮನಪಾವು ತರಾತುರಿಯಲ್ಲಿ ಬೈಕಂಪಾಡಿ ಮಾರುಕಟ್ಟೆಗೆ ಸ್ಥಳಾಂತರ ಮಾಡಿಸಿದೆ. ಈ ಸಂದರ್ಭ ವ್ಯಾಪಾರಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಬೈಕಂಪಾಡಿ ಮಾರುಕಟ್ಟೆಯಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ಮತ್ತು ಪಾಲಿಕೆ ಭರವಸೆ ನೀಡಿತ್ತು. ಆದರೆ ಇದೀಗ ಆ ಭರವಸೆ ಮೊದಲ ಮಳೆಗೆ ಕೊಚ್ಚಿ ಹೋಗಿದೆ. ಬೈಕಂಪಾಡಿಯಲ್ಲಿ ತಾತ್ಕಾಲಿಕವಾಗಿ ಮಾರುಕಟ್ಟೆ ಪ್ರಾರಂಭಿಸಿದರೂ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದು ವ್ಯಾಪಾರಿಗಳು ಆಕ್ರೋಶಗೊಂಡಿದ್ದಾರೆ. ಮೀನು ಮಾರುಕಟ್ಟೆ, ತರಕಾರಿ ಎಲ್ಲವೂ ಸೋಮವಾರ ಸುರಿದ ಭಾರೀ ಮಳೆಗೆ ಕೊಚ್ಚಿಹೋಗಿದೆ.
ಇನ್ನು ಎಪಿಎಂಸಿ ಯಲ್ಲಿ ಶೌಚಾಲಯ, ದಾಸ್ತಾನು ಕೊಠಡಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು ಎಂದು ವ್ಯಾಪಾರಿಗಳು ಮನವಿಯನ್ನೂ ಮಾಡಿದ್ದರೂ ಕೂಡ ಅದಿನ್ನೂ ಈಡೇರಿಲ್ಲ. ಇದರಿಂದಾಗಿ ವ್ಯಾಪಾರಿಗಳ ಬದುಕು ಅತಂತ್ರವಾಗಿದೆ. ತಕ್ಷಣ ಶಾಸಕರು, ಮನಪಾ ಅಧಿಕಾರಿಗಳು ಸೂಕ್ತ ಸೌಲಭ್ಯ ಒದಗಿಸಬೇಕೆಂದು ಎಫ್‌ಐಟಿಯು ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಉಳ್ಳಾಲ ಮನವಿ ಮಾಡಿದ್ದಾರೆ.





