ಕೇಂದ್ರದ 20 ಲಕ್ಷ ಕೋಟಿ ರೂ.ಪ್ಯಾಕೇಜ್‍ನಲ್ಲಿ ಜನರ ನೈಜ ಸಮಸ್ಯೆ ಪರಿಹರಿಸುವ ಉದ್ದೇಶವಿಲ್ಲ: ಪಿಎಫ್‍ಐ

ಬೆಂಗಳೂರು, ಮೇ 19: ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ದೇಶವು ತಳಮಟ್ಟದಲ್ಲಿ ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸುವ ಯಾವ ಉದ್ದೇಶವನ್ನು ಹೊಂದಿಲ್ಲವೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ)ದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಹೇಳಿದೆ.
ಕೇಂದ್ರ ಸರಕಾರದ ಈ ಉತ್ತೇಜಕ ಪ್ಯಾಕೇಜ್ ಕೇವಲ ನಿಕಟ ಬಂಡವಾಳಶಾಹಿಗಳಿಗೆ ಮತ್ತು ದೊಡ್ಡ ಉದ್ಯಮಗಳಿಗೆ ಮಾತ್ರವಾಗಿದೆ. ಲಾಕ್‍ಡೌನ್ ಪ್ಯಾಕೇಜ್‍ನ ಸೋಗಿನಲ್ಲಿ ದೇಶದ ಸಂಪತ್ತು ಮತ್ತು ಸಂಪನ್ಮೂಲಗಳಲ್ಲಿ ಅನಿರ್ದಿಷ್ಟ ಪ್ರವೇಶಾವಕಾಶಗಳನ್ನು ಬಂಡವಾಳಶಾಹಿಗಳಿಗೆ ಒದಗಿಸಲಾಗಿದೆ. ವಿವಿಧ ಆರ್ಥಶಾಸ್ತ್ರಜ್ಞರಿಂದ ನಡೆಸಲಾದ ಪ್ಯಾಕೇಜ್‍ನ ವಿಶ್ಲೇಷಣೆಯ ಪ್ರಕಾರ ಕೇಂದ್ರ ಸರಕಾರವು ಹಿಂದಿನ ಯೋಜನೆ ಮತ್ತು ಘೋಷಣೆಗಳನ್ನು ಒಂದು ಹೊಸ ಪ್ಯಾಕೇಜ್‍ನ ರೂಪದಲ್ಲಿ ಸೇರಿಸಿ ದೇಶವನ್ನು ವಂಚಿಸಲು ಪ್ರಯತ್ನಿಸಿದೆ ಎಂಬುದನ್ನು ಬಹಿರಂಗ ಪಡಿಸಿದೆ.
ಲಾಕ್‍ಡೌನ್‍ನಿಂದ ಹಸಿವು ಮತ್ತು ಹತಾಶೆಗೆ ದೂಡಲ್ಪಟ್ಟ ದೇಶದ ಕಾರ್ಮಿಕ ವರ್ಗವು ಸರಕಾರದ ಸಹಾಯ ಹಸ್ತಕ್ಕೆ ಕಾಯುತ್ತಿತ್ತು. ಆದರೆ, ಅವರಿಗೆ ಸಿಕ್ಕಿದ್ದು ಟೊಳ್ಳು ಭರವಸೆ ಮಾತ್ರ. ಸಣ್ಣ ಉದ್ಯಮ ಹಾಗೂ ಉದ್ಯಮಿಗಳ ಸಾಲ ಯೋಜನೆಗಳ ಉದ್ದೇಶ ಅವರಿಗೆ ಲಾಭ ತಂದುಕೊಡುವುದಲ್ಲ. ಬದಲಿಗೆ, ಅವರನ್ನು ಮತ್ತಷ್ಟು ಸಾಲದ ಕೂಪಕ್ಕೆ ತಳ್ಳುವುದಾಗಿದೆ.
ಒಟ್ಟಾರೆ ಕೇಂದ್ರ ಸರಕಾರದ ಪ್ಯಾಕೇಜ್ ಭಾರತೀಯರ ಪುನರುಜ್ಜೀವನ ಮತ್ತು ಬದುಕುಳಿಯುವಿಕೆಯ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ, ನಿಕಟ ಬಂಡವಾಳಶಾಹಿ ಪ್ಯಾಕೇಜ್ ಆಗಿರುವ ಇದು ಆಯ್ದ ಕೆಲವು ಮಂದಿಗೆ ಮಾತ್ರ ಲಾಭ ಉಂಟು ಮಾಡುವ ಗುರಿಯನ್ನಷ್ಟೆ ಹೊಂದಿದೆ ಎಂದು ಪಿಎಫ್‍ಐ ಪತ್ರಿಕಾ ಪ್ರಕಟನೆಯ ಮೂಲಕ ಆರೋಪಿಸಿದೆ.







