ಕೇಂದ್ರದ ‘ಪಂಚತಾರಾ ತ್ಯಾಜ್ಯಮುಕ್ತ ’ನಗರಗಳ ಪಟ್ಟಿಯಲ್ಲಿ ರಾಜ್ಯದ ಈ ನಗರ

ಫೈಲ್ ಚಿತ್ರ
ಹೊಸದಿಲ್ಲಿ,ಮೇ 19: ಅತ್ಯುತ್ತಮ ತ್ಯಾಜ್ಯ ನಿರ್ವಹಣೆಗಾಗಿ ನಗರಗಳ ರೇಟಿಂಗ್ ಅನ್ನು ಕೇಂದ್ರ ಸರಕಾರವು ಮಂಗಳವಾರ ಪ್ರಕಟಿಸಿದ್ದು, ಕರ್ನಾಟಕದ ಮೈಸೂರು ಸೇರಿದಂತೆ ದೇಶದ ಆರು ನಗರಗಳು ಅತ್ಯುನ್ನತ ‘ಪಂಚತಾರಾ ತ್ಯಾಜ್ಯಮುಕ್ತ ’ನಗರಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.
ಛತ್ತೀಸ್ಗಡದ ಅಂಬಿಕಾಪುರ, ಮಧ್ಯಪ್ರದೇಶದ ಇಂದೋರ್, ಗುಜರಾತಿನ ರಾಜಕೋಟ್ ಮತ್ತು ಸೂರತ್ ಹಾಗೂ ಮಹಾರಾಷ್ಟ್ರದ ನವಿಮುಂಬೈ ಈ ರೇಟಿಂಗ್ ಪಡೆದಿರುವ ಇತರ ನಗರಗಳಾಗಿವೆ.
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ರೇಟಿಂಗ್ ಪ್ರಕಟಿಸಿದರು. ಒಟ್ಟು 141 ನಗರಗಳಿಗೆ ರೇಟಿಂಗ್ ನೀಡಲಾಗಿದ್ದು,ಆರು ಪಂಚತಾರಾ, 65 ತ್ರಿತಾರಾ ಮತ್ತು 70 ನಗರಗಳು ಏಕತಾರಾ ನಗರಗಳಾಗಿವೆ.
ಹೊಸದಿಲ್ಲಿ, ಹರ್ಯಾಣದ ಕರ್ನಾಲ್, ಆಂಧ್ರಪ್ರದೇಶದ ತಿರುಪತಿ ಮತ್ತು ವಿಜಯವಾಡಾ, ಚಂಡಿಗಡ, ಛತ್ತೀಸ್ಗಡದ ಭಿಲಾಯಿ ನಗರ, ಗುಜರಾತಿನ ಅಹ್ಮದಾಬಾದ್, ಮಧ್ಯಪ್ರದೇಶದ ಭೋಪಾಲ್ ಮತ್ತು ಜಾರ್ಖಂಡ್ನ ಜಮ್ಷೆಡ್ಪುರ ತ್ರಿತಾರಾ ತ್ಯಾಜ್ಯಮುಕ್ತ ರೇಟಿಂಗ್ ಗಳಿಸಿರುವ ನಗರಗಳಲ್ಲಿ ಸೇರಿವೆ.
ಏಕತಾರಾ ನಗರಗಳಲ್ಲಿ ದಿಲ್ಲಿ ದಂಡುಪ್ರದೇಶ, ಹರ್ಯಾಣದ ರೋಹ್ಟಕ್, ಮಧ್ಯಪ್ರದೇಶದ ಗ್ವಾಲಿಯರ್, ಮಹೇಶ್ವರ,ಖಾಂಡ್ವಾ, ಬದ್ನಾವರ್ ಮತ್ತು ಹಾಥೋಡ್ ಹಾಗೂ ಗುಜರಾತಿನ ವಡೋದರಾ,ಭಾವನಗರ ಮತ್ತು ವ್ಯಾರಾ ನಗರಗಳು ಸೇರಿವೆ.
ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನೈಮರ್ಲ್ಯ ಮತ್ತು ಪರಿಣಾಮಕಾರಿ ಘನತ್ಯಾಜ್ಯ ನಿರ್ವಹಣೆ ಈಗ ಹಿಂದೆಂದಿಗಿಂತ ಹೆಚ್ಚು ಮಹತ್ವವನ್ನು ಪಡೆದುಕೊಂಡಿವೆ. ಕಳೆದ ಐದು ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಹೆಚ್ಚಿನ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುವಲ್ಲಿ ಸ್ವಚ್ಛ ಭಾರತ ಅಭಿಯಾನವು ವಹಿಸಿರುವ ಮಹತ್ವದ ಪಾತ್ರವಿಲ್ಲದಿದ್ದರೆ ಹಾಲಿ ಕೋವಿಡ್-19 ಸ್ಥಿತಿಯು ಇನ್ನಷ್ಟು ಹದಗೆಟ್ಟಿರುತ್ತಿತ್ತು ಎಂದು ಪುರಿ ಹೇಳಿದರು.
‘ಸ್ಟಾರ್ ರೇಟಿಂಗ್’ ಮೌಲ್ಯಾಂಕನಕ್ಕಾಗಿ ಒಟ್ಟು 1,435 ನಗರಗಳು ಅರ್ಜಿಗಳನ್ನು ಸಲ್ಲಿಸಿದ್ದು,ಈ ಪೈಕಿ 141 ಅರ್ಹ ನಗರಗಳಿಗೆ ರೇಟಿಂಗ್ ನೀಡಲಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರಾ ಅವರು ತಿಳಿಸಿದರು.







