28 ಉದ್ಯೋಗಿಗಳಿಗೆ ಕೊರೋನ: ಝೀ ನ್ಯೂಸ್ ಕಚೇರಿ, ಸ್ಟುಡಿಯೋಗಳಿಗೆ ಬೀಗಮುದ್ರೆ
ಫೈಲ್ ಚಿತ್ರ
ಹೊಸದಿಲ್ಲಿ,ಮೇ 19: ಝೀ ನ್ಯೂಸ್ನ 28 ಸಿಬ್ಬಂದಿಗಳಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು, ಹೆಚ್ಚಿನವರು ಲಕ್ಷಣರಹಿತರಾಗಿದ್ದಾರೆ ಎಂದು ಸಂಸ್ಥೆಯ ಮುಖ್ಯ ಸಂಪಾದಕ ಸುಧೀರ್ ಚೌಧರಿ ಅವರು ಟ್ವೀಟಿಸಿದ್ದಾರೆ.
ಮೇ 15ರಂದು ಓರ್ವ ಉದ್ಯೋಗಿಯಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿತ್ತು. ಬಳಿಕ ಕಂಪೆನಿಯು ಆತನ ಸಂಪರ್ಕಕ್ಕೆ ಬಂದಿದ್ದಿರಬಹುದಾದ ಇತರ ಉದ್ಯೋಗಿಗಳನ್ನು ಪರೀಕ್ಷೆಗೊಳಪಡಿಸಿದ್ದು,ಈ ಪೈಕಿ 27 ಜನರ ವರದಿಗಳು ಪಾಸಿಟಿವ್ ಆಗಿವೆ.
ಎಲ್ಲ ಮಾರ್ಗಸೂಚಿಗಳು ಮತ್ತು ಶಿಷ್ಟಾಚಾರಗಳನ್ನು ಪಾಲಿಸಲಾಗುತ್ತಿದೆ. ಸೋಂಕು ನಿವಾರಣೆಗಾಗಿ ಕಚೇರಿ, ನ್ಯೂಸ್ರೂಮ್ ಮತ್ತು ಸ್ಟುಡಿಯೋಗಳಿಗೆ ಬೀಗಮುದ್ರೆ ಹಾಕಲಾಗಿದ್ದು,ಝೀ ನ್ಯೂಸ್ ತಂಡವನ್ನು ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಎಂದು ಕಂಪನಿಯು ತಿಳಿಸಿದೆ. ಸದ್ಯ ಝೀ ಮೀಡಿಯಾ ಕಾರ್ಪೊರೇಷನ್ 2,500 ಸಿಬ್ಬಂದಿಗಳನ್ನು ಹೊಂದಿದ್ದು, ಪ್ರತಿಯೊಬ್ಬರ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ ಎಂದು ಕಂಪನಿಯು ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿಯ ಟೀಕಾಕಾರರ ವಿರುದ್ಧ ದಾಳಿ ನಡೆಸಿದ್ದ ಚೌಧರಿ,ಸೋಂಕಿತರಿಗೆ ಮನೆಗಳಲ್ಲಿ ಕುಳಿತುಕೊಳ್ಳಲು ಮತ್ತು ಮೀಮ್ ಗಳನ್ನು ಶೇರ್ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಅವರು ಬದ್ಧತೆಯ ವೃತ್ತಿಪರರಾಗಿರುವುದರಿಂದ ಕೆಲಸಕ್ಕೆ ಬಂದಿದ್ದರು ಎಂದು ಹೇಳಿದ್ದರು.
ನಂತರ ಕೆಲವು ಸಾಮಾಜಿಕ ಜಾಲತಾಣಿಗರು, ಝೀನ್ಯೂಸ್ನ ಕೆಲವು ಸೋಂಕಿತ ಸಿಬ್ಬಂದಿಗಳು ಈಗಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಚೌಧರಿ, ತನ್ನ ಹೇಳಿಕೆಯನ್ನು ತಿರುಚಿ ದುರುದ್ದೇಶಪೂರ್ವಕ ಅಭಿಯಾನವೊಂದು ನಡೆಯುತ್ತಿದೆ. ಯಾವುದೇ ಸೋಂಕಿತ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿಲ್ಲ. ಮೇ 15ರಂದು ಪತ್ತೆಯಾಗಿದ್ದ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಎಲ್ಲರನ್ನೂ ತಪಾಸಣೆ ನಡೆಸಿ ಕ್ವಾರಂಟೈನ್ಗೊಳಪಡಿಸಲಾಗಿದೆ ಎಂದಿದ್ದಾರೆ.