ವಲಸೆ ಕಾರ್ಮಿಕರ ವಸತಿ, ಪ್ರಯಾಣ ವ್ಯವಸ್ಥೆಗೆ ಆಗ್ರಹಿಸಿ ಎಸ್ಯುಸಿಐ ವತಿಯಿಂದ ಆನ್ಲೈನ್ ಚಳವಳಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 19: ಕೋವಿಡ್-19 ಲಾಕ್ಡೌನ್ ಹಿನ್ನೆಲೆಯಲ್ಲಿ ದೇಶದ ಹಲವಾರು ನಗರ ಮತ್ತು ಪಟ್ಟಣಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ಕೂಡಲೇ ಊಟ, ವಸತಿ ಮತ್ತು ಪ್ರಯಾಣದ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ಎಸ್ಯುಸಿಐ ವತಿಯಿಂದ ಅಖಿಲ ಭಾರತ ವಲಸೆ ಕಾರ್ಮಿಕರ ರಕ್ಷಣಾ ದಿನಕ್ಕೆ ಕರೆ ನೀಡಲಾಗಿತ್ತು. ಇದರ ಭಾಗವಾಗಿ ರಾಜ್ಯಾದ್ಯಂತ ಆನ್ಲೈನ್ ಮೂಲಕ ಚಳವಳಿ ಆರಂಭಿಸಿದ ಹಲವು ಮಂದಿ ವಲಸೆ ಕಾರ್ಮಿಕರಿಗೆ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿದರು.
ಈ ವೇಳೆ ಎಸ್ಯುಸಿಐಣ ಪಾಲಿಟ್ ಬ್ಯೂರೋ ಸದಸ್ಯ ಕೆ.ರಾಧಾಕೃಷ್ಣ ಮಾತನಾಡಿ, ಸರಿಯಾದ ಪೂರ್ವಯೋಜನೆ ಇಲ್ಲದೆ, ಹಠಾತ್ತಾಗಿ ಲಾಕ್ಡೌನ್ ಘೋಷಿಸಿದ ಕಾರಣದಿಂದಾಗಿ ದೇಶದ ವಿವಿಧ ಭಾಗಗಳಲ್ಲಿದ್ದ ವಲಸೆ ಕಾರ್ಮಿಕರು ದಿಕ್ಕಾಪಾಲಾದರು. ಲಾಕ್ಡೌನ್ನಿಂದಾಗಿ ಉದ್ಯೋಗವಿಲ್ಲದೆ, ಕನಿಷ್ಠ ಸೌಲಭ್ಯವೂ ಇಲ್ಲದೆ ಪರದಾಡುತ್ತಿದ್ದಾರೆ. ಕಾಲ್ನಡಿಗೆಯ ಮೂಲಕ ನೂರಾರು, ಸಾವಿರಾರು ಕಿಮೀ ದೂರವಿರುವ ತಮ್ಮ ಊರುಗಳಿಗೆ ಹೋಗುವ ಮಾರ್ಗ ಮಧ್ಯೆ ಹಲವು ಮಂದಿ ಸಾವನ್ನಪ್ಪಿದ್ದಾರೆ.
ವಲಸೆ ಕಾರ್ಮಿಕರ ದುಸ್ಥಿತಿಗಳು ಪ್ರತಿದಿನ ವರದಿಯಾಗುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ಆ ಕಡೆ ಯೋಚನೆ ಮಾಡಿಲ್ಲ. ಇಲ್ಲಿಯವರೆಗೂ ಕಾರ್ಮಿಕರ ಬದುಕನ್ನು ಉತ್ತಮಗೊಳಿಸುವಂತಹ ಯಾವುದೇ ಸಮರ್ಪಕ ಕ್ರಮಗಳನ್ನು ಕೈಗೊಂಡಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇನ್ನೂ ಹಲವಾರು ವಲಸೆ ಕಾರ್ಮಿಕರ ಜೀವಗಳು ನಮ್ಮ ಕಣ್ಣೇದುರೆ ಬಲಿಯಾಗಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಎಸ್ಯುಸಿಐ ಕಾರ್ಯದರ್ಶಿ ಕೆ.ಉಮಾ ಮಾತನಾಡಿ, ವಲಸೆ ಕಾರ್ಮಿಕರು ಈ ದೇಶದ ಸಂಪತ್ತಿನ ನಿರ್ಮಾರ್ತೃಗಳು. ಅವರಿಲ್ಲದೆ ರಸ್ತೆಯಿಲ್ಲ, ಸೇತುವೆ ಇಲ್ಲ. ಆದರೆ, ಕೊರೋನದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಕಾರ್ಮಿಕರಿಗೆ ಅವಶ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಉಚಿತವಾಗಿ ವಿಶೇಷ ವಿಮಾನದ ಮೂಲಕ ಕರೆ ತರಲಾಗಿದೆ. ಕಾರ್ಮಿಕರು ದೇಶದೊಳಗೆಯೇ ತಮ್ಮ ಊರುಗಳಿಗೆ ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಿಲ್ಲ. ಕೇಂದ್ರ ಸರಕಾರ ಇಂತಹ ಜನವಿರೋಧಿ, ಕಾರ್ಮಿಕ ವಿರೋಧಿ ಧೋರಣೆಯನ್ನು ಪ್ರತಿಯೊಬ್ಬ ಭಾರತೀಯನು ಖಂಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.