ದ.ಕ. ಜಿಲ್ಲೆ: 97 ಕೊರೋನ ವೈರಸ್ ವರದಿ ನೆಗೆಟಿವ್
ಮಂಗಳೂರು, ಮೇ 19: ಕೊರೋನ ವೈರಸ್ ರೋಗಕ್ಕೆ ಸಂಬಂಧಿಸಿ ಮಂಗಳವಾರ ಪ್ರಯೋಗಾಲಯದಿಂದ ಸ್ವೀಕರಿಸಿದ 97 ನೆಗೆಟಿವ್ ಆಗಿದೆ. ಇನ್ನೂ 299 ಮಂದಿಯ ವರದಿ ಬರಲು ಬಾಕಿ ಇದೆ.
ಮಂಗಳವಾರ 267 ಮಂದಿಯ ಗಂಟಲಿನ ದ್ರವವನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಅಲ್ಲದೆ 230 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದ್ದು, ಇದರೊಂದಿಗೆ ಈವರೆಗೆ 41,577 ಮಂದಿಯ ಸ್ಕ್ರೀನಿಂಗ್ ಮಾಡಿದಂತಾಗಿದೆ. ಜ್ವರ ಕ್ಲಿನಿಕ್‌ಗಳಲ್ಲಿ 3,578 ಮಂದಿ ಮತ್ತು ಸಂಚಾರ ಕ್ಲಿನಿಕ್‌ನಲ್ಲಿ 161 ಮಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಸುರತ್ಕಲ್‌ನ ಎಎನ್‌ಐಟಿಕೆಯಲ್ಲಿ 18 ಮತ್ತು ಕದ್ರಿಯ ಇಎಸ್‌ಐ ಆಸ್ಪತ್ರೆಯಲ್ಲಿ 14 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. 13 ಮಂದಿಯ ಮೇಲೆ ವಿಶೇಷ ನಿಗಾ ವಹಿಸಲಾಗಿದೆ.
ಈವರೆಗೆ 5,418 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 5,119 ಮಂದಿಯ ವರದಿಯನ್ನು ಸ್ವೀಕರಿಸ ಲಾಗಿದ್ದು, ಅದರಲ್ಲಿ 5,065 ಮಂದಿಯ ವರದಿಯು ನೆಗೆಟಿವ್ ಮತ್ತು 54 ಮಂದಿಯ ವರದಿಯು ಪಾಸಿಟಿವ್ ಬಂದಿದೆ.
ಈವರೆಗೆ ಪತ್ತೆಯಾದ 54 ಪಾಸಿಟಿವ್‌ಗಳ ಪೈಕಿ 17 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, 32 ಮಂದಿ ಕೋವಿಡ್-ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎ.19ರಂದು ಮಹಿಳೆ ಮತ್ತು ಎ.23 ಹಾಗೂ ಎ.30ರಂದು ಇಬ್ಬರು ವೃದ್ಧೆಯರು, ಮೇ 13ರಂದು ಮಹಿಳೆ, ಮೇ 14ರಂದು ವೃದ್ಧೆ ಸಹಿತ ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 32 ರೋಗಿಗಳ ಪೈಕಿ 30 ಮಂದಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. 76 ವರ್ಷದ ಗಂಡಸು ಮತ್ತು 68 ವರ್ಷದ ಹೆಂಗಸಿನ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ, ಕಾಲಿನ ಸೋಂಕು, ಶ್ವಾಸಕೋಶ ತೊಂದರೆ, ಹೃದಯ ಸಂಬಂಧಿ ರೋಗದಿಂದ ಇವರು ಬಳಲುತ್ತಿದ್ದಾರೆ.







