ಬಸ್ ಮಾಲಕರ-ಆರ್‌ಟಿಒ ಸಭೆ
ಮಂಗಳೂರು, ಮೇ 19: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರಕ್ಕೆ ರಾಜ್ಯ ಸರಕಾರಕ್ಕೆ ಹಸಿರು ನಿಶಾನೆ ಸಿಕ್ಕಿದರೂ ಕೂಡ ದ.ಕ.ಜಿಲ್ಲೆಯಲ್ಲಿ ಖಾಸಗಿ ಸಿಟಿ, ಸರ್ವಿಸ್, ಎಕ್ಸ್‌ಪ್ರೆಸ್, ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳು ಸದ್ಯ ಸಂಚಾರ ಆರಂಭಿಸುವ ಸಾಧ್ಯತೆ ಇಲ್ಲ.
ಜಿಲ್ಲಾಧಿಕಾರಿಯ ಸೂಚನೆಯ ಮೇರೆಗೆ ಮಂಗಳವಾರ ಆರ್‌ಟಿಒ ಕಚೇರಿಯಲ್ಲಿ ಬಸ್ ಮಾಲಕರ ಸಂಘದ ಮುಖಂಡರ ಮತ್ತು ಆರ್‌ಟಿಒ ಅಧಿಕಾರಿಗಳ ಮಧ್ಯೆ ಈ ನಿಟ್ಟಿನಲ್ಲಿ ಸಭೆ ನಡೆಸದರೂ ಕೂಡ ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.
ನಾವು ತಕ್ಷಣ ಬಸ್ ಸಂಚಾರ ಆರಂಭಿಸಿದರೂ ಮೇ ತಿಂಗಳ ರೋಡ್ ಟ್ಯಾಕ್ಸ್ ಪಾವತಿಸಬೇಕು. ಈಗಾಗಲೆ ನಷ್ಟದಲ್ಲಿರುವ ನಮಗೆ ತಿಂಗಳ ಪೂರ್ತಿ ಟ್ಯಾಕ್ಸ್ ಪಾವತಿಸಲು ಸಾಧ್ಯವಾಗದು. ಅಲ್ಲದೆ ಸುರಕ್ಷತೆಯ ದೃಷ್ಟಿಯಿಂದ ಅರ್ಧಕ್ಕರ್ಧ ಪ್ರಯಾಣಿಕರನ್ನು ಹಳೆಯ ಪ್ರಯಾಣ ದರದಲ್ಲಿ ಕರೆದೊಯ್ಯಲು ಸಾಧ್ಯವಾಗದು. ಹಾಗಾಗಿ ಪ್ರಯಾಣ ದರ ಹೆಚ್ಚಿಸಬೇಕು. ರೋಡ್ ಟ್ಯಾಕ್ಸ್ ಪಾವತಿಗೆ ವಿನಾಯಿತಿ ನೀಡಬೇಕು ಅಥವಾ ಪಾವತಿ ಅವಧಿಯನ್ನು ವಿಸ್ತರಿಸಬೇಕು ಎಂಬ ಬೇಡಿಕೆಯನ್ನು ಆರ್‌ಟಿಒ ಮುಂದಿಟ್ಟಿದ್ದೇವೆ. ಆದರೆ, ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿಲ್ಲ. ನಾಲ್ಕನೇ ಹಂತದ ಲಾಕ್‌ಡೌನ್ ಮೇ 31ರವರೆಗೆ ಜಾರಿಯಲ್ಲಿರುತ್ತದೆ. ಇನ್ನೇನಿದ್ದರೂ ಜೂನ್ ಮೊದಲ ವಾರ ಬಸ್ ಸಂಚಾರ ಮಾಡುವ ಬಗ್ಗೆ ಚಿಂತಿಸುತ್ತಿದ್ದೇವೆ ಎಂದು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.







