ಸಮುದಾಯಕ್ಕೆ ಕೋವಿಡ್ ಹರಡದಂತೆ ಎಚ್ಚರ ವಹಿಸಲಾಗಿದೆ : ರಘುಪತಿ ಭಟ್

ಉಡುಪಿ ಮೇ 19: ಉಡುಪಿ ಜಿಲ್ಲೆಗೆ ಹೊರ ಜಿಲ್ಲೆ, ರಾಜ್ಯ ಮತ್ತು ವಿದೇಶ ಗಳಿಂದ 7000ಕ್ಕೂ ಅಧಿಕ ಮಂದಿ ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಸಮುದಾಯದಲ್ಲಿ ಕೋವಿಡ್-19 ಹರಡದಂತೆ ಎಚ್ಚರ ವಹಿಸಲಾಗಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳ ವಾರ ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ವತಿಯಿಂದ ನೀಡಲಾದ ಉಡುಪಿ ತಾಲೂಕಿನಲ್ಲಿ ಕೋವಿಡ್ ಮಾದರಿ ಸಂಗ್ರಹಿಸುವ ಸಂಚಾರಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಪ್ರಸ್ತುತ ಕಂಡು ಬಂದಿರುವ 16 ಪಾಸಿಟಿವ್ ಪ್ರಕರಣಗಳು ಹೊರ ರಾಜ್ಯ ಮತ್ತು ವಿದೇಶದಿಂದ ಬಂದ ಪ್ರಯಾಣಿಕರಿಂದ ಬಂದಿದ್ದು, ಅವರು ಜಿಲ್ಲೆಗೆ ಬಂದ ಕೂಡಲೇ ಕ್ವಾರಂಟೈನ್‌ಗೆ ಒಳಪಡಿಸಿರುವ ಕಾರಣ, ಈ ಕಾಯಿಲೆ ಸಮುದಾಯಕ್ಕೆ ಹರಡಿಲ್ಲ ಎಂದರು.
ಕಾರ್ಕಳ ತಾಲೂಕಿನ ಕೋವಿಡ್ ಮಾದರಿ ಸಂಗ್ರಹಿಸುವ ಸಂಚಾರಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ರಾಜ್ಯ ಸರಕಾರ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಮತ್ತು ಕೇರಳ ರಾಜ್ಯ ಗಳಿಂದ ಬರುವ ಪ್ರಯಾಣಿಕರಿಗೆ ಮೇ 31ರ ವರೆಗೆ ನಿರ್ಬಂಧ ವಿಧಿಸಿರುವು ದರಿಂದ ಜಿಲ್ಲೆಗೆ ಹೊರರಾಜ್ಯದಿಂದ ಬರುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ. ಜಿಲ್ಲೆಗೆ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ನಾಗರಿಕರು ಆಗಮಿಸಿದ್ದು, ಅವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಇಡಲಾಗಿದೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮಾತನಾಡಿ, ಪ್ರತಿಯೊಂದು ಸಂಚಾರಿ ಮಾದರಿ ಸಂಗ್ರಹ ವಾಹನಕ್ಕೆ 30000 ರೂ. ವೆಚ್ಚವಾಗಿದ್ದು, ಈ ಮೊತ್ತವನ್ನು ದಾನಿಗಳ ನೆರವಿನಿಂದ ಸಂಗ್ರಹಿಸಲಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಚಾರಿ ವಾಹನದ ಮೂಲಕ ಸ್ವಾಬ್ ಸಂಗ್ರಹ ನಡೆಯಲಿದೆ. ಉಡುಪಿಯ ವಾಹನಕ್ಕೆ ಇಬ್ರಾಹಿಂ ಕೋಲ್ವಾ ಹಾಗೂ ಕಾರ್ಕಳದ ವಾಹನಕ್ಕೆ ನಿತಿನ್ ಶೆಟ್ಟಿ ಹಾಗೂ ಅಬ್ದಲ್ ರೆಹಮಾನ್ ಆರ್ಥಿಕ ನೆರವು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಅಪರ ಜಿಲ್ಲಾಧಿ ಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ.ಸುಧೀರ್‌ಚಂದ್ರ ಸೂಡಾ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾವಂಜೆ, ಖಜಾಂಚಿ ಚಂದ್ರ ಶೇಖರ್, ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ದಿವಾಕರ ಖಾರ್ವಿ, ರವಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.







