ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಕಾರು ಚಾಲಕ ಆತ್ಮಹತ್ಯೆ

ಬೆಂಗಳೂರು, ಮೇ 19: ಲಾಕ್‍ಡೌನ್ ಸಡಿಲಿಕೆ ಆದರೂ, ಕೆಲಸ ಮತ್ತು ಕುಟುಂಬ ನಿರ್ವಹಣೆ ಹೇಗೆ ಎಂದು ಆತಂಕ ವ್ಯಕ್ತವಾಗಿ ಕಾರು ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ರಾಮಮೂರ್ತಿ ನಗರ ನಿವಾಸಿ ಕೆ.ಮಣಿ(38) ಮೃತ ಕಾರು ಚಾಲಕ ಎಂದು ಪೊಲೀಸರು ಗುರುತಿಸಿದ್ದಾರೆ.
ಮರಣ ಪತ್ರ: ರಾಜ್ಯದಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆ ಮಾಡಲಾಗಿದೆ. ಆದರೆ, ಕೊರೋನ ಭೀತಿಯಲ್ಲಿ ಕೆಲಸ ಮಾಡುವುದು ಮತ್ತು ಕುಟುಂಬ ನಿರ್ವಹಣೆ ಹೇಗೆ ಎಂಬ ಚಿಂತೆ ಮಣಿ ಅವರಿಗೆ ಇತ್ತು ಎನ್ನಲಾಗಿದೆ.
'ಆರ್ಥಿಕ ಸಮಸ್ಯೆಯಿಂದ ಮನೆಯಲ್ಲಿ ತೊಂದರೆ ಉಂಟಾಗಿ ಊಟಕ್ಕೂ ಕಷ್ಟ ಎದುರಾಗಿತ್ತು. ದುಡಿಮೆ ಬಗ್ಗೆ ಮನೆಯಲ್ಲಿ ಜಗಳವೂ ಶುರುವಾಗಿತ್ತು. ಇದೇ ರೀತಿಯಾದರೆ ಮುಂದೆ ಜೀವನ ನಡೆಸುವುದು ಹೇಗೆ?' ಎಂದು ಪ್ರಶ್ನಿಸಿ ಆತ್ಮಹತ್ಯೆಗೂ ಮುನ್ನ ಮಣಿ ಮರಣ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ನಿಖರ ಮಾಹಿತಿ ತಿಳಿಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.