ಕ್ವಾರೆಂಟೈನ್‍ಗಾಗಿ ರಾತ್ರಿಯಿಡೀ ಕಾರಿನಲ್ಲಿ ಕಳೆದರು !
ಪಡುಬಿದ್ರೆ, ಮೇ 19: ಮುಂಬೈಯಲ್ಲಿ ಹೊಟೇಲ್ ಕಾರ್ಮಿಕರಾಗಿದ್ದು, ಲಾಕ್‌ಡೌನ್‌ನಿಂದ ಬಾಕಿಯಾಗಿದ್ದ ಕರಾವಳಿಯ ಐವರು ಕಾರು ಮೂಲಕ ಉಡುಪಿಗೆ ಸೋಮವಾರ ತಲುಪಿದ್ದು, ಮೂವರು ಕ್ವಾರಂಟೈನ್‌ಗಾಗಿ ರಾತ್ರಿಯಿಡೀ ಅಲೆದಾಡಿದ ಘಟನೆ ನಡೆದಿದೆ.
ಇಬ್ಬರು ಉಡುಪಿ ಜಿಲ್ಲೆಯವರಾಗಿದ್ದು, ಮೂವರು ದ.ಕ. ಜಿಲ್ಲೆಯ ನಿವಾಸಿಗಳಾಗಿದ್ದರು. ಇವರು ಪಾಸ್ ಪಡೆದು ಕಾರಿನಲ್ಲಿ ಸೋಮವಾರ ಉಡುಪಿಗೆ ತಲುಪಿದ್ದರು. ಉಡುಪಿಯ ಇಬ್ಬರಿಗೆ ಉಡುಪಿಯಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ದ.ಕ. ಜಿಲ್ಲೆಯ ಮೂವರನ್ನು ಮಂಗಳೂರಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದರು. ಅದರಂತೆ ಮಂಗಳೂರಿಗೆ ತೆರಳಿ ಕ್ವಾರೆಂಟೈನ್ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು. ಆದರೆ ಇದಕ್ಕೆ ಒಪ್ಪದ ಅಧಿಕಾರಿಗಳು, ಉಡುಪಿಗೆ ಪಾಸ್ ಮಾಡಿರುವುದರಿಂದ ಅಲ್ಲಿಗೆ ತೆರಳುವಂತೆ ಸೂಚಿಸಿದರು.
ಹೀಗೆ ಅತ್ತ ಇತ್ತ ಅಲೆದಾಡಿದ ಇವರು ರಾತ್ರಿ ಇಡೀ ಕಾರಿನಲ್ಲೇ ಕಳೆದರು. ಇವರಿಗೆ ಪಡುಬಿದ್ರೆ ಗ್ರಾಪಂ ಸದಸ್ಯ ಹಸನ್ ಕಂಚಿನಡ್ಕ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದ್ದರು. ಇಂದು ಬೆಳಗ್ಗೆ ಹೆಜಮಾಡಿಯ ತಪಾಸಣಾ ಕೇಂದ್ರದಲ್ಲಿ ಮತ್ತೆ ಅವರಿಗೆ ಉಡುಪಿ ತೆರಳುವಂತೆ ಸೂಚಿಸಿದ್ದಾರೆ. ಈ ಗೊಂದಲದಿಂದ ಬೇಸತ್ತ ಮೂವರು ಕೊನೆಗೆ ಬೇರೆ ದಾರಿ ಕಾಣದೆ ದ.ಕ. ಜಿಲ್ಲೆಯನ್ನು ಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ.





