ಜೂನ್ 1ರಿಂದ 200 ನಾನ್ ಎಸಿ ರೈಲುಗಳ ಸಂಚಾರ

ಹೊಸದಿಲ್ಲಿ: ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ಮರಳಲು ಹೆಚ್ಚಿನ ಅನುಕೂಲ ಕಲ್ಪಿಸುವ ದೃಷ್ಟಿಯಿಂದ, ಜೂನ್ 1ರಿಂದ 200 ಶೆಡ್ಯೂಲ್ಡ್ ಟಿಕೆಟ್ ರೈಲುಗಳನ್ನು ಪ್ರತಿದಿನ ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕರೆಸಿಕೊಳ್ಳುವ ವಿಚಾರದಲ್ಲಿ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳ ನಡುವೆ ಮುಸುಕಿನ ಗುದ್ದಾಟ ನಡೆದಿರುವ ಮಧ್ಯೆಯೇ ರೈಲ್ವೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಹೊಸ ರೈಲುಗಳು ಶ್ರಮಿಕ್ ಸ್ಪೆಷಲ್ ರೈಲುಗಳಲ್ಲದೇ ಹೆಚ್ಚುವರಿ ರೈಲುಗಳಾಗಿದ್ದು, ಹವಾನಿಯಂತ್ರಿತವಲ್ಲದ ಈ ರೈಲುಗಳಿಗೆ ಸಾಮಾನ್ಯ ಮುಂಗಡ ಕಾಯ್ದಿರಿಸುವಿಕೆ ಕೂಡಾ ಇರುತ್ತದೆ. ಈ ಮಧ್ಯೆ ಶ್ರಮಿಕ್ ಸ್ಪೆಷಲ್ ರೈಲು ಸೇವೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳ ಒಪ್ಪಿಗೆ ಪಡೆದು ವಿಧಿವಿಧಾನದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ಹೊರಗಿನಿಂದ ಬಂದ ಕಾರ್ಮಿಕರಿಗೆ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರನ್ನು ರಾಜ್ಯದ ಗಡಿಯೊಳಗೆ ಪ್ರವೇಶಿಸಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳ ಒಪ್ಪಿಗೆಯಂತೆ ವಿಧಿವಿಧಾನದಲ್ಲಿ ಬದಲಾವಣೆ ತರಲಾಗಿದೆ. ಶ್ರಮಿಕ್ ಸ್ಪೆಷಲ್ ರೈಲುಗಳ ಸಂಖ್ಯೆಯನ್ನು ಇಮ್ಮಡಿಗೊಳಿಸುವ ನಿರ್ಧಾರವನ್ನೂ ರೈಲ್ವೆ ಪ್ರಕಟಿಸಿದೆ.
ಹೊಸ ಹವಾನಿಯಂತ್ರಿತವಲ್ಲದ ರೈಲುಗಳು ಮುಂದೆ ಪ್ರಕಟವಾಗಲಿರುವ ವೇಳಾಪಟ್ಟಿಗೆ ಅನುಗುಣವಾಗಿ ಕಾರ್ಯಾಚರಣೆ ನಡೆಸಲಿದ್ದು, ಶೀಘ್ರವೇ ಆನ್‌ಲೈನ್ ಬುಕ್ಕಿಂಗ್ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಈ ರೈಲುಗಳಿಗೆ ಯಾರು ಬೇಕಾದರೂ ಆನ್‌ಲೈನ್ ಟಿಕೆಟ್ ಖರೀದಿಸಬಹುದಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿದ್ದರೆ, ಇದು ವಲಸೆ ಕಾರ್ಮಿಕರ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಆರಂಭಿಸುತ್ತಿರುವ ಸೇವೆ ಎಂದು ರೈಲ್ವೆ ಹೇಳಿದೆ. ಯಾವುದೇ ರೈಲು ನಿಲ್ದಾಣಗಳಲ್ಲಿ ಇದರ ಟಿಕೆಟ್ ಮಾರಾಟ ಮಾಡುವುದಿಲ್ಲ ಎಂದು ಹೇಳಿದೆ.







