ಸರಳವಾಗಿ ಈದ್ ಆಚರಿಸಲು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕರೆ
ಉಡುಪಿ, ಮೇ 20 : ಕೊರೋನ ಲಾಕ್ ಡೌನ್ ನಾಲ್ಕನೇ ಹಂತದಲ್ಲಿರುವ ಸಂದರ್ಭದಲ್ಲಿ ಬಂದಿರುವ ಈದುಲ್ ಫಿತ್ರ್ ನಮಾಝನ್ನು ಖಾಝಿಯವರು ಸೂಚಿಸಿದಂತೆ ಮನೆಯಲ್ಲೇ ನಿರ್ವಹಿಸಿ ಹಬ್ಬವನ್ನು ಎಲ್ಲರೂ ಅತ್ಯಂತ ಸರಳವಾಗಿ ಆಚರಿಸಬೇಕು ಹಾಗು ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಾಧ್ಯವಿದ್ದಷ್ಟು ತಮ್ಮ ಸಮೀಪದಲ್ಲಿರುವ ಅರ್ಹರಿಗೆ ನೆರವು ನೀಡಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕರೆ ನೀಡಿದೆ.
ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ದೇಶಾದ್ಯಂತ ಆಗಿರುವಂತೆ ಉಡುಪಿ ಜಿಲ್ಲೆಯ ಸಮಸ್ತ ಮುಸ್ಲಿಮರು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಸರಕಾರ ವಿಧಿಸಿದ ಎಲ್ಲ ನೀತಿ ನಿಯಮಗಳನ್ನು ಪಾಲಿಸಿದ್ದಾರೆ. ಕೊರೋನ ವಿರುದ್ಧದ ಹೋರಾಟದಲ್ಲಿ ಸರಕಾರಕ್ಕೆ, ಜಿಲ್ಲಾಡಳಿತಕ್ಕೆ ಸರ್ವ ರೀತಿಯಲ್ಲಿ ಬೆಂಬಲ ನೀಡಬೇಕು ಎಂಬ ಉದ್ದೇಶದಿಂದ ಪವಿತ್ರ ರಮಝಾನ್ ತಿಂಗಳಲ್ಲೂ ಮಸೀದಿಗೆ ಹೋಗದೆ ನಿರ್ಬಂಧವನ್ನು ಪಾಲಿಸಿದ್ದಾರೆ. ಇವೆಲ್ಲವುಗಳ ಜೊತೆ ಸಂಕಷ್ಟದಲ್ಲಿದ್ದ ಸರ್ವಧರ್ಮೀಯರಿಗೆ ಸಹಾಯ ಹಸ್ತ ಚಾಚಿದ್ದಾರೆ. ಇತ್ತೀಚಿಗೆ ಅಂಗಡಿಗಳು ತೆರೆದರೂ ಈದ್ ಖರೀದಿಗಾಗಿ ಹೋಗದೆ ಆ ಹಣವನ್ನು ಬಡವರಿಗೆ ನೆರವಾಗಲು ಬಳಸಿದ್ದಾರೆ. ಇದು ನಿಜಕ್ಕೂ ಅಭಿನಂದನೀಯ ನಡೆ. ಈಗ ಒಟ್ಟಾರೆ ಸಂಕಷ್ಟದ ಪರಿಸ್ಥಿತಿ ಇದೆ. ನಮ್ಮ ಅಕ್ಕಪಕ್ಕದಲ್ಲಿ ಮಾತ್ರವಲ್ಲದೆ ರಾಜ್ಯ ಹಾಗು ದೇಶದೆಲ್ಲೆಡೆ ಬಹಳ ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರು, ರೈತರು, ಬಡ ಮಹಿಳೆಯರು, ಮಕ್ಕಳು ಅತ್ಯಂತ ಕಷ್ಟದ ಕ್ಷಣಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಈವರೆಗೆ ಅಳವಡಿಸಿಕೊಂಡಿರುವ ಸರಳತೆಯನ್ನು ಮುಂದುವರಿಸಿ ಈ ಕಠಿಣ ಸಂದರ್ಭದಲ್ಲಿ ಬಂದಿರುವ ಈದುಲ್ ಫಿತ್ರ್ ನಮಾಝನ್ನು ಮನೆಯಲ್ಲೇ ನಿರ್ವಹಿಸಿ, ಹಬ್ಬವನ್ನು ಆದಷ್ಟು ಸರಳವಾಗಿ , ಕುಟುಂಬ ಸದಸ್ಯರ ಜೊತೆಗೇ ಆಚರಿಸಿ , ದುಂದು ವೆಚ್ಚವಿಲ್ಲದೆ, ಅನಗತ್ಯ ಮನೋರಂಜನೆ, ಪ್ರಯಾಣ ಇತ್ಯಾದಿಗಳಿಗೆ ಹೋಗದೆ ಆಚರಿಸುವುದು ಸೂಕ್ತ. ಈ ಬಗ್ಗೆ ಜಿಲ್ಲಾ ಖಾಝಿಗಳು ಕೂಡ ಕರೆ ನೀಡಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಹಾಗು ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೌಲಾ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.





