ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್ಗೆ ನೊಟೀಸ್ ಜಾರಿಗೊಳಿಸಿದ ರಾಜ್ಯ ಸರಕಾರ

ಡಾ.ಎಂ.ವಿ.ವೆಂಕಟೇಶ್
ಮಂಡ್ಯ, ಮೇ 20: ಪತ್ರಕರ್ತರಿಗೆ ಕೋವಿಡ್-19ರ ಪರೀಕ್ಷೆ ವೇಳೆ ಸಂಭವಿಸಿದ ಗಲಾಟೆ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಆಶಾ ಕಾರ್ಯಕರ್ತೆ ಆತ್ಮಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಿದೆ.
ಮಂಡ್ಯ ಪತ್ರಕರ್ತರಿಗೆ ಕೋವಿಡ್-19 ಪರೀಕ್ಷೆ ವಿಷಯದಲ್ಲಿ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡರ ವಿರುದ್ಧ ಷಡ್ಯಂತ್ರ ರೂಪಿಸಿದ ಆರೋಪ ಹಾಗೂ ಆಶಾ ಕಾರ್ಯಕರ್ತೆ ಮೇಲೆ ಸ್ಥಳೀಯರು ಹಲ್ಲೆ ಮಾಡಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದರೂ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳದೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಕುಮಾರಸ್ವಾಮಿ ದೂರು ನೀಡಿದ್ದರು.
ಎ.28ರಂದು ಕುಮಾರಸ್ವಾಮಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಅವರು ಡಿಸಿ ಡಾ.ವೆಂಕಟೇಶ್ಗೆ ಕಾರಣ ಕೇಳಿ ನೊಟೀಸ್ ನೀಡಿದ್ದು, ಎರಡು ಪ್ರಕರಣಗಳ ಕುರಿತು ಉತ್ತರ ನೀಡುವಂತೆ ತಿಳಿಸಿದ್ದಾರೆ.





