ಮಹಾರಾಷ್ಟ್ರ-ಕರ್ನಾಟಕ ಗಡಿ ನಿಪ್ಪಾಣಿಯಲ್ಲಿ ಸಂಕಷ್ಟದಲ್ಲಿದ್ದ 400 ಮಂದಿಗೆ ಬರಲು ಅವಕಾಶ: ಕೋಟ

ಉಡುಪಿ, ಮೇ 20: ಕಳೆದ ರವಿವಾರ ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಕೆಲ ರಾಜ್ಯಗಳಿಂದ ಕರ್ನಾಟಕಕ್ಕೆ ಮರಳುವ ಕನ್ನಡಿಗರಿಗೆ ರಾಜ್ಯಕ್ಕೆ ಮರಳಲು ನೀಡಿದ ಅವಕಾಶವನ್ನು ಮತ್ತೆ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಮಹಾರಾಷ್ಟ್ರ-ಕರ್ನಾಟಕ ಗಡಿಯಾದ ನಿಪ್ಪಾಣಿಯಲ್ಲಿ ಸಂಕರ್ಷದಲ್ಲಿದ್ದ ಗರ್ಭಿಣಿಯರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಉಡುಪಿ ಮತ್ತು ಮಂಗಳೂರಿನ ಮೂರು ಬಸ್‌ಗಳ ಜನರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಡಿಕೊಂಡ ವಿಶೇಷ ಮನವಿಯ ಮೇರೆಗೆ ಮಾನವೀಯ ನೆಲೆಯಲ್ಲಿ ರಾಜ್ಯ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ದಕ್ಷಿಣ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದಿಂದ ಉಡುಪಿಗೆ ಹೊರಟ 32 ಮಂದಿ ಪ್ರಯಾಣಿಕರಿರುವ ಬಸ್ಸಿನಲ್ಲಿದ್ದ ಏಳು ತಿಂಗಳ ಗರ್ಭಿಣಿಯೊಬ್ಬರು ನಿಪ್ಪಾಣಿಯಲ್ಲಿ ತೀವ್ರ ತೊಂದರೆ ಅನುಭವಿಸುತಿದ್ದ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯದ ಗಡಿ ದಾಟಲು ಅವಕಾಶ ನೀಡುವಂತೆ ಕೋರಿ ಬಂದ ಅಸಂಖ್ಯಾತ ದೂರವಾಣಿ ಕರೆಗಳ ಬಳಿಕ ಇಂದು ಸಂಜೆ ತಾನು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ, ಮಾನವೀಯತೆಯ ನೆಲೆಯಲ್ಲಿ ಉಡುಪಿ ಮತ್ತು ಮಂಗಳೂರಿನ ಮೂರು ಬಸ್ಸುಗಳಿಗೆ ಬರಲು ಅವಕಾಶ ನೀಡುವಂತೆ ಮನವಿ ಮಾಡಿದ್ದೆ ಎಂದು ಕೋಟ ರಾತ್ರಿ ‘ವಾರ್ತಾಭಾರತಿ’ಗೆ ತಿಳಿಸಿದರು.
ತಕ್ಷಣ ಮುಖ್ಯಮಂತ್ರಿ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಕರೆ ಮಾಡಿ ಈ ಬಸ್‌ಗಳಿಗೆ ರಾಜ್ಯ ಪ್ರವೇಶಿಸಲು ಅವಕಾಶ ನೀಡುವಂತೆ ತಿಳಿಸಿದ್ದು, ಅದರಂತೆ ಮುಖ್ಯ ಕಾರ್ಯದರ್ಶಿಗಳು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು ಎಂದವರು ವಿವರಿಸಿದರು.
ಇವರೆಲ್ಲರು ಮಹಾರಾಷ್ಟ್ರದ ಪಾಸ್‌ಗಳನ್ನು ಹೊಂದಿದ್ದರೂ, ಕರ್ನಾಟಕ ರಾಜ್ಯ ಗಡಿ ಪ್ರವೇಶಕ್ಕಾಗಿ ಸೇವಾಸಿಂಧು ಪಾಸ್‌ಗಳನ್ನು ಹೊಂದಿರಲಿಲ್ಲ. ಹೀಗಾಗಿ ಅವರಿಗೆ ರಾಜ್ಯದೊಳಗೆ ಪ್ರವೇಶಿಸಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಇವವರೆಲ್ಲ ನಿಪ್ಪಾಣಿಯಲ್ಲೇ ಕಳೆದೆರಡು ದಿನಗಳಿಂದ ಬಸ್ಸಿನಲ್ಲೇ ತಂಗಿದ್ದರು. ಉಡುಪಿ ಕುಕ್ಕೆಹಳ್ಳಿಯ ಗರ್ಭಿಣಿ ದೀಪಿಕಾ ಶೆಟ್ಟಿಯೂ ಇವರಲ್ಲಿ ಸೇರಿದ್ದರು ಎನ್ನಲಾಗಿದೆ. ಸ್ಥಳೀಯ ಹೊಟೇಲ್ ಉದ್ಯಮಿಗಳು ಇವರಿಗೆ ಊಟ-ತಿಂಡಿಯ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಅಷ್ಟರಲ್ಲಿ ಮಂಡ್ಯ, ಚಿಕ್ಕಮಗಳೂರು, ಹಾಸನಗಳ ಸುಮಾರು 400 ಮಂದಿ 15ರಷ್ಟು ಬಸ್ಸುಗಳಲ್ಲಿ ಅಲ್ಲಿಗೆ ಬಂದು ತಮಗೂ ಈ ಅವಕಾಶ ನೀಡಬೇಕೆಂದು ಕೋರಿಕೆ ಸಲ್ಲಿಸಿದರು. ಕೊನೆಗೆ ಮುಖ್ಯ ಕಾರ್ಯದರ್ಶಿ ಗಳೊಂದಿಗೆ ಸಮಾಲೋಚಿಸಿ ಅವರಿಗೂ ರಾಜ್ಯಕ್ಕೆ ಬರಲು ಅವಕಾಶ ನೀಡಲಾಯಿತು ಎಂದು ಸಚಿವರು ತಿಳಿಸಿದರು.
ಹೀಗಾಗಿ ನಿಪ್ಪಾಣಿ ಗಡಿ ಭಾಗದಲ್ಲಿ 400ರಷ್ಟು ಮಂದಿ ಇದ್ದು, ಅವರಿಗೆಲ್ಲಾ ರಾಜ್ಯ ಪ್ರವೇಶಿಸಲು ಅವಕಾಶ ನೀಡಲಾಗುತಿದ್ದು, ಬೆಳಗಾವಿ ಜಿಲ್ಲಾಧಿಕಾರಿ ಇದಕ್ಕಾಗಿ ಸೂಕ್ತ ಕ್ರಮಕೈಗೊಂಡಿದ್ದಾರೆ. ಕರಾವಳಿಯ ಮಂದಿ ಮೂರು ಬಸ್‌ಗಳಲ್ಲಿ ಉಡುಪಿ ಮತ್ತು ಮಂಗಳೂರಿಗೆ ಬರಲಿದ್ದಾರೆ ಎಂದು ಕೋಟ ತಿಳಿಸಿದರು.








