ಶಾಲೆಯಲ್ಲೇ ಸಿಬಿಎಸ್‌ಇ ಪರೀಕ್ಷೆ: ಸಚಿವಾಲಯದ ಹೇಳಿಕೆ

ಹೊಸದಿಲ್ಲಿ, ಮೇ 20: ಸಿಬಿಎಸ್‌ಇನ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ವಿದ್ಯಾರ್ಥಿ ದಾಖಲಾತಿ ಪಡೆದಿರುವ ಶಾಲೆಯಲ್ಲೇ ನಡೆಯುತ್ತದೆ. ಬಾಹ್ಯ ಪರೀಕ್ಷಾ ಕೇಂದ್ರದಲ್ಲಿ ನಡೆಯುವುದಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬುಧವಾರ ಘೋಷಿಸಿದೆ.
ವಿದ್ಯಾರ್ಥಿಗಳ ಪ್ರಯಾಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳು ಕಲಿತ ಶಾಲೆಯಲ್ಲೇ ಪರೀಕ್ಷೆಗೆ ಹಾಜರಾಗಬೇಕು, ಯಾವುದೇ ಬಾಹ್ಯ ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡಿಲ್ಲ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದಕ್ಕೆ ಶಾಲೆಗಳೇ ಜವಾಬ್ದಾರರು. ವಿದ್ಯಾರ್ಥಿಗಳು ತಮ್ಮೊಂದಿಗೆ ಸ್ಯಾನಿಟೈಸರ್ ಬಾಟಲಿ ಕೊಂಡೊಯ್ಯಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಇಲಾಖೆಯ ಅಧಿಕಾರಿಯೊಬ್ಬರು ಘೋಷಿಸಿದ್ದಾರೆ. ಶಾಲೆಗಳು ತಮ್ಮ ವಿದ್ಯಾರ್ಥಿಗಳ ಬಗ್ಗೆ ಪಕ್ಷಪಾತ ಮಾಡಬಾರದು ಮತ್ತು ಪರೀಕ್ಷಾ ಪ್ರಕ್ರಿಯೆಯ ಮೇಲೆ ಸ್ವತಂತ್ರ, ಬಾಹ್ಯ ನಿರೀಕ್ಷಕರು ನಿಗಾ ವಹಿಸಬೇಕೆಂಬ ಉದ್ದೇಶದಿಂದ ಸಾಮಾನ್ಯವಾಗಿ ಬೋರ್ಡ್ ಪರೀಕ್ಷೆಗಳು ಗೊತ್ತುಪಡಿಸಿದ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತವೆ. ಆದರೆ ಈ ಬಾರಿ, ವಿದ್ಯಾರ್ಥಿಗಳು ದಾಖಲಾತಿ ಪಡೆದ ಶಾಲೆಯಲ್ಲೇ ಪರೀಕ್ಷೆ ನಡೆಸಲು ಇಲಾಖೆ ನಿರ್ಧರಿಸಿದೆ.





