ಲಾಕ್ ಡೌನ್: ತಂದೆಯನ್ನು ಸೈಕಲ್‌ನಲ್ಲಿ ಕೂರಿಸಿ 1,200 ಕಿ.ಮೀ. ಕ್ರಮಿಸಿದ 15 ವರ್ಷದ ಬಾಲಕಿ
ಪಾಟ್ನ, ಮೇ 20: ಬಿಹಾರದ 15 ವರ್ಷದ ಹುಡುಗಿಯೊಬ್ಬಳು ತೀವ್ರ ಅಸ್ವಸ್ಥಗೊಂಡಿದ್ದ ತಂದೆಯನ್ನು ಸೈಕಲ್‌ನ ಕ್ಯಾರಿಯರ್ ಮೇಲೆ ಕೂರಿಸಿಕೊಂಡು ಸುಮಾರು 1,200 ಕಿ.ಮೀ ದೂರದವರೆಗೆ ಸೈಕಲ್ ತುಳಿದು ಸ್ವಂತ ಗ್ರಾಮ ತಲುಪಿದ ಸಾಹಸ ಮೆರೆದಿದ್ದಾಳೆ.
ಹರ್ಯಾಣದ ಗುರುಗ್ರಾಮದಿಂದ ಬಿಹಾರದ ದರ್ಭಾಂಗ ಜಿಲ್ಲೆಗೆ ತಲುಪಿದ ತಂದೆ- ಮಗಳನ್ನು ಈಗ ಅವರ ಗ್ರಾಮ ಸಿರುಲಿಯ ಬಳಿ ಇರುವ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಹಾರ ಮೂಲದ ಮೋಹನ್ ಪಾಸ್ವಾನ್ ಎಂಬಾತ ಗುರುಗ್ರಾಮದಲ್ಲಿ ಆಟೋರಿಕ್ಷಾ ಚಾಲಕನ ಕೆಲಸ ಮಾಡುತ್ತಿದ್ದ. ಈತನ ಪತ್ನಿ ಊರಿನಲ್ಲೇ ಅಂಗನವಾಡಿ ಶಿಕ್ಷಕಿಯಾಗಿದ್ದರೆ, ಪಾಸ್ವಾನ್ ಜೊತೆ ಆತನ 15 ವರ್ಷದ ಪುತ್ರಿ ಜ್ಯೋತಿ ಕುಮಾರಿ ಇದ್ದಳು. ಆದರೆ ಕೆಲವು ತಿಂಗಳ ಹಿಂದೆ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡ ಪಾಸ್ವಾನ್‌ಗೆ ಚಾಲಕ ವೃತ್ತಿ ನಿರ್ವಹಿಸಲು ಸಾಧ್ಯವಾಗದೆ ಮನೆಯಲ್ಲೇ ಹಾಸಿಗೆ ಹಿಡಿದಿದ್ದ. ಈ ಮಧ್ಯೆ, ಬಾಡಿಗೆ ನೀಡಿ, ಇಲ್ಲಾ ಮನೆ ಖಾಲಿ ಮಾಡಿ ಎಂದು ಮನೆಯ ಮಾಲಕರು ಒತ್ತಡ ಹೇರತೊಡಗಿದರು. ಈ ಮಧ್ಯೆ ಲಾಕ್‌ಡೌನ್ ಜಾರಿಯಾದ ಕಾರಣ ಪಾಸ್ವಾನ್‌ಗೆ ಯಾವುದೇ ಕೆಲಸ ಸಿಗಲಿಲ್ಲ. ಆದ್ದರಿಂದ ಹಣದ ಕೊರತೆಯಾಗಿ ಔಷಧವನ್ನೂ ತ್ಯಜಿಸಬೇಕಾಯಿತು. ಆಗ ಜ್ಯೋತಿ ಕುಮಾರಿ ತಂದೆಯ ಆರೈಕೆಯ ಹೊಣೆ ಹೊತ್ತಳು. ಲಾಕ್‌ಡೌನ್ ವಿಸ್ತರಣೆಯಾದ ಕಾರಣ ಹುಟ್ಟೂರಿಗೆ ವಾಪಸಾಗಲು ತಂದೆ ಮಗಳು ನಿರ್ಧರಿಸಿದರು. ಆದರೆ ವಾಹನ ಸೌಕರ್ಯವಿರಲಿಲ್ಲ ಮತ್ತು ಪಾಸ್ವಾನ್‌ಗೆ ನಡೆದುಕೊಂಡು ಹೋಗಲು ಸಾಧ್ಯವಿರಲಿಲ್ಲ. ಕಡೆಗೆ ಮಗಳ ಒತ್ತಾಯದ ಮೇರೆಗೆ, ಕೈಯಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ತೆತ್ತು ಹಳೆಯ ಸೈಕಲ್ ಒಂದನ್ನು ಖರೀದಿಸಿದರು. ಆದರೆ ಸೈಕಲ್‌ನಲ್ಲಿ ಅಷ್ಟು ದೂರ ಪ್ರಯಾಣಿಸುವುದು ಸುಲಭವಲ್ಲ ಎಂದು ಮಗಳಿಗೆ ಬುದ್ಧಿ ಹೇಳಿದರೂ ಆಕೆ ಹಟ ಬಿಡಲಿಲ್ಲ. ಅಂತಿಮವಾಗಿ ಪಾಸ್ವಾನ್‌ನನ್ನು ಸೈಕಲ್ ಕ್ಯಾರಿಯರ್ ಮೇಲೆ ಕೂರಿಸಿಕೊಂಡು ಜ್ಯೋತಿ ಗುರುಗ್ರಾಮದಿಂದ ಹೊರಟಳು.
ದಿನಾ 30ರಿಂದ 40 ಕಿ.ಮೀ ದೂರ ಕ್ರಮಿಸುತ್ತಿದ್ದೆವು. ದಾರಿಯಲ್ಲಿ ಕೆಲವೆಡೆ ಅನಾಥರಿಗೆ, ಬಡವರಿಗೆ ಆಹಾರ ವಿತರಿಸುತ್ತಿದ್ದಾಗ ನಾವೂ ಕೈಯೊಡ್ಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ಕೆಲವು ಲಾರಿಯವರು ನಿಲ್ಲಿಸಿ ನಮ್ಮನ್ನು ಸೈಕಲ್ ಸಮೇತ ಕರೆದೊಯ್ಯುತ್ತಿದ್ದರು. ಅಂತೂ ಕೆಲವು ವಾರದ ಬಳಿಕ ನಮ್ಮ ರಾಜ್ಯವನ್ನು ಸೇರಿಕೊಂಡೆವು ಎಂದು ಪಾಸ್ವಾನ್ ಹೇಳಿದ್ದಾರೆ.