ಕೇಂದ್ರ, ರಾಜ್ಯದ ವಿಶೇಷ ಪ್ಯಾಕೇಜ್‍ಗಳು ಅರ್ಹರಿಗೆ ತಲುಪುವಂತಾಗಬೇಕು: ಅಬ್ದುಲ್ ಮಜೀದ್ ಶೇಖ್

ಭಟ್ಕಳ : ಕೋವಿಡ್-19 ಸಂಕಷ್ಟ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್‍ಗಳು ಸಂಕಷ್ಟಕ್ಕೆ ಸಿಲುಕಿರುವ ಬಡ ಮತ್ತು ದುಡಿಯುವ ವರ್ಗದವರಿಗೆ ಪ್ರಾಮಾಣಿಕವಾಗಿ ತಲುಪುವಂತಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ಸಿನ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಖ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಕೋವಿಡ್-19 ಲಾಕಡೌನ್‍ನಿಂದಾಗಿ ದುಡಿಯುವ ವರ್ಗ, ಬಡವರು, ರೈತರು, ಮೀನುಗಾರರು ಹಾಗೂ ಇನ್ನಿತರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಕೇಂದ್ರ ಸರಕಾರದ ಪ್ಯಾಕೇಜ್ ಆದಷ್ಟು ಶೀಘ್ರ ಫಲಾನುಭವಿಗಳಿಗೆ ತಲುಪುವಂತಾಗಬೇಕು.
ಲಾಕಡೌನ್‍ನಿಂದಾಗಿ ಜನರಿಗೆ ದುಡಿಮೆ ಇಲ್ಲವಾಗಿದ್ದು, ಬಡವರು, ಮಧ್ಯಮ ವರ್ಗದವರು ಇಂದು ವಿದ್ಯುತ್ ಬಿಲ್ ತುಂಬಲಿಕ್ಕೂ ಕಷ್ಟಪಡುವ ಸಂದರ್ಭ ಬಂದಿದ್ದು ಸರಕಾರ ಮನೆಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ಅಡಕೆ, ಮಲ್ಲಿಗೆ, ಕಲ್ಲಂಗಡಿ, ಗೇರು ಸೇರಿದಂತೆ ವಿವಿಧ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ರೈತರು ಕೂಡ ಬೆಳೆದ ಬೆಳೆಗೆ ಮಾರುಕಟ್ಟೆ ಹಾಗೂ ಸರಿಯಾದ ದರ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೀದಿ ಬದಿ ವ್ಯಾಪಾರಸ್ಥರು, ಸಣ್ಣ ವ್ಯಾಪಾರಸ್ಥರು, ವಾಹನ ಚಾಲಕರು, ಕಾರ್ಮಿಕ ವರ್ಗ ಸೇರಿದಂತೆ ಹಲವರು ದುಡಿಮೆ ಇಲ್ಲದೇ ಕಂಗಾಲಾಗಿದ್ದಾರೆ. ಇಂತವರಿಗೆ ಸರಕಾರದ ಪ್ಯಾಕೇಜಿನ ಸದುಪಯೋಗವಾದರೆ ಅವರಿಗೆ ಸ್ವಲ್ಪ ಮಟ್ಟಿಗಾದರೂ ಆರ್ಥಿಕವಾಗಿ ಚೇತರಿಸಿಕೊಳ್ಳಲು ಅನುಕೂಲ ವಾಗಲಿದೆ. ಕಳೆದ ಎರಡು ತಿಂಗಳಿನಿಂದ ಕೊರೋನ ಅಟ್ಟಹಾಸ ಮುಂದುವರಿದಿರುವುದರಿಂದ ಬಿಪಿಎಲ್ ಕಾರ್ಡದಾರರಿಗೆ ಅಕ್ಕಿ, ಬೇಳೆಯ ಜತೆಗೆ ಅಗತ್ಯ ದಿನಬಳಕೆ ಸಾಮಗ್ರಿಗಳನ್ನು ಸರಕಾರದಿಂದಲೇ ವಿತರಿಸುವಂತಾಗಬೇಕು ಮತ್ತು ಅಡುಗೆ ಅನಿಲವನ್ನು ಕೇವಲ ಉಜ್ವಲ ಯೋಜನೆಯವರಿಗೆ ಮಾತ್ರ ನೀಡಿದ್ದು ಸರಿಯಲ್ಲ, ಬಿ.ಪಿ.ಎಲ್.ಕಾರ್ಡುದಾರರಿಗೂ ಕೂಡಾ ಮೂರು ತಿಂಗಳುಗಳ ಕಾಲ ಉಚಿತವಾಗಿ ಅಡುಗೆ ಅನಿಲ ವಿತರಿಸುವಂತಾದರೆ ಬಡವರಿಗೆ ಸಹಾಯವಾದಂತಾಗುತ್ತದೆ ಎಂದಿರುವ ಅವರು ಈ ಬಗ್ಗೆ ನಮ್ಮ ಶಾಸಕರು, ಸಚಿವರು ಮತ್ತು ಸರಕಾರ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.







