ಮನವಿ ಸಲ್ಲಿಸಲು ಬಂದ ರೈತ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಚಿವ ಮಾಧುಸ್ವಾಮಿ: ವಿಡಿಯೋ ವೈರಲ್
ಸಚಿವರನ್ನು ಸಂಪುಟದಿಂದ ಕೈಬಿಡಲು ಸಿದ್ದರಾಮಯ್ಯ ಒತ್ತಾಯ

ಕೋಲಾರ, ಮೇ.20: ಕೆರೆಕಟ್ಟೆ ಒಡೆಯದಂತೆ ಮನವಿ ಪತ್ರ ಕೊಡಲು ಬಂದ ವೇಳೆ ರೈತ ಮಹಿಳೆಯೊಬ್ಬರಿಗೆ ಕಾನೂನು, ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದ್ದು, ಸಚಿವರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಕೆ.ಸಿ ವ್ಯಾಲಿ ಯೋಜನೆ ವ್ಯಾಪ್ತಿಯ ಎಸ್.ಅಗ್ರಹಾರ ಗ್ರಾಮದ ಕೆರೆ ಪರಿಶೀಲಿಸಲು ಬಂದಿದ್ದ ಸಚಿವ ಮಾಧುಸ್ವಾಮಿ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷೆ ನಳಿನಿ ಅವರು ಕೆರೆಕಟ್ಟೆ ಹೊಡೆಯದಂತೆ ಮನವಿ ಸಲ್ಲಿಸಿ ಚರ್ಚೆಗೆ ಮುಂದಾದರು. ಈ ವೇಳೆ ಸಚಿವರು, ‘ಹೇ ರಾಸ್ಕಲ್, ಮುಚ್ಚು ಬಾಯಿ’ ಎಂದು ಗದರಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭ ಕೆರಳಿದ ಮಹಿಳಾ ಸದಸ್ಯರು ಈ ರೀತಿ ಏಕೆ ಮಾತನಾಡುತ್ತೀರಿ ಎಂದು ಸಚಿವರ ವಿರುದ್ಧ ತಿರುಗಿಬಿದ್ದಿದ್ದಾರೆ. ಕೂಡಲೇ ಸಚಿವರು ಮಹಿಳೆಯರನ್ನು ದೂರ ಕಳುಹಿಸುವಂತೆ ಪೊಲೀಸರಿಗೆ ತಿಳಿಸಿದರು. ಈ ವೇಳೆ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ಪೊಲೀಸರ ಜತೆ ಮಹಿಳೆಯರು ವಾಗ್ವಾದಕ್ಕಿಳಿದರು. ಬಳಿಕ ಪೊಲೀಸರು ಮಹಿಳೆಯರನ್ನು ದೂರ ತಳ್ಳಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ. ಸಚಿವ ಮಾಧುಸ್ವಾಮಿ ಹಾಗೂ ಪೊಲೀಸರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸಂಪುಟದಿಂದ ಮಾಧುಸ್ವಾಮಿ ಕೈಬಿಡಲು ಸಿದ್ದರಾಮಯ್ಯ ಒತ್ತಾಯ
ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿ ದುರ್ವರ್ತನೆ ಅಕ್ಷಮ್ಯ. ಯಡಿಯೂರಪ್ಪ ತಕ್ಷಣ ಸಚಿವರು, ಆ ರೈತ ಮಹಿಳೆಯ ಕ್ಷಮೆಯಾಚಿಸುವಂತೆ ಮಾಡಿ, ಅವರನ್ನು ಸಂಪುಟದಿಂದ ಕೈ ಬಿಟ್ಟು ಸರಕಾರದ ಮಾನ ಉಳಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ.
‘ಬಿಜೆಪಿ ನಾಯಕರೆ ಹೆಣ್ಣಿಗೆ ಗೌರವ ಕೊಡುವುದು ಹೀಗೇನಾ?’
ತಮ್ಮ ಬಳಿ ಕಷ್ಟ ಹೇಳಿಕೊಳ್ಳಲು ಬಂದ ಮಹಿಳೆಯ ಬಳಿ ವಿರುದ್ಧ ಕ್ರೌರ್ಯದ ವರ್ತನೆಯನ್ನು ತೋರಿರುವ ಬಿಜೆಪಿ ಸಚಿವ ಜೆ.ಸಿ.ಮಾಧುಸ್ವಾಮಿ ಈ ಕೂಡಲೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತೇನೆ. ಬಿಜೆಪಿ ಪಕ್ಷದ ಮಹನೀಯರೆ ಹೆಣ್ಣನ್ನು ಭಾರತಾಂಬೆ ಎಂದು ಪರಿಗಣಿಸಬೇಕೆಂದು ಬೋಧಿಸುವ ನೀವು ಅವರಿಗೆ ಗೌರವ ಕೊಡುವುದು ಹೀಗೇನಾ? ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಟ್ವೀಟ್ ಮಾಡಿದ್ದಾರೆ.
ಸಚಿವ ಜೆ.ಸಿ.ಮಾಧುಸ್ವಾಮಿಗೆ ಮನವಿ ನೀಡಲು ತೆರಳಿದ್ದ ರೈತಸಂಘದ ಪದಾಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಚಿವರ ವರ್ತನೆ ಖಂಡನೀಯವಾಗಿದ್ದು, ಇವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಬೇಕು. ಹಾಗೂ ಮಹಿಳಾ ಪೇದೆಗಳನ್ನು ಬಳಸದೆ ರೈತಸಂಘದ ಮಹಿಳಾ ಪದಾಧಿಕಾರಿಗಳ ಮೇಲೆ ದರ್ಪ ತೋರಿರುವ ಕೋಲಾರ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಆಂಜಿನಪ್ಪರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ರೈತಸಂಘವು ಮೇ.21 ರ ಬೆಳಗ್ಗೆ 10.30ಕ್ಕೆ ನಗರದ ಪಲ್ಲವಿ ವೃತ್ತದಲ್ಲಿ ಪ್ರತಿಕೃತಿ ದಹನ, ಪತಿಭಟನೆಗೆ ಕರೆ ನೀಡಿದೆ.







