ಸರಿಯಾದ ಸಂಖ್ಯೆ 20 ಲಕ್ಷ ಕೋಟಿ ರೂ. ಅಲ್ಲ, 1.86 ಲಕ್ಷ ಕೋಟಿ ರೂ.: ಚಿದಂಬರಂ

ಹೊಸದಿಲ್ಲಿ, ಮೇ 20: ಕುಸಿದಿರುವ ಆರ್ಥಿಕತೆಗೆ ಉತ್ತೇಜನ ತುಂಬಲು ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್ ಕೇವಲ ತಮಾಷೆಯಾಗಿದೆ. ಈ 20 ಲಕ್ಷ ಕೋಟಿ ರೂ. ಎಲ್ಲಿಂದ ಬಂತು. ಸರಿಯಾದ ಸಂಖ್ಯೆ 1,86,650 ಕೋಟಿ ರೂ. ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.
ಪ್ಯಾಕೇಜ್‌ನ ಆರ್ಥಿಕ ಮೌಲ್ಯವನ್ನು ಪ್ರತಿಯೊಂದು ಬ್ಯಾಂಕ್ ಕೂಡಾ ನಿಗದಿಮಾಡಿದ್ದು 3 ಲಕ್ಷ ಕೋಟಿ ಅತ್ಯಂತ ಯಥೇಚ್ಛ ವೌಲ್ಯಾಂಕನವಾಗಿದೆ. ಸರಕಾರದ ಬಳಿ ಇಷ್ಟು ಹಣವಿಲ್ಲ. ಅವರು ಬೇರೆಡೆಯಿಂದ ಸಾಲ ಪಡೆಯಬೇಕಾಗಿದೆ. ಆದರೆ ವಿತ್ತ ಸಚಿವೆ ಸಾಲ ಪಡೆಯುವ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಆದರೆ ಆರ್ಥಿಕ ಹಿಂಜರಿತದ ಪ್ರಮಾಣವನ್ನು ಕಡಿಮೆ ಅಂದಾಜಿಸುವುದು ಸರಿಯಲ್ಲ. ಭಾರತ ಮಾತ್ರವಲ್ಲ, ಎಲ್ಲಾ ರಾಷ್ಟ್ರಗಳೂ ಆರ್ಥಿಕ ಹಿಂಜರಿತದ ಹಾದಿಯಲ್ಲಿವೆ. ಭಾರತವನ್ನು ಕೆಳದರ್ಜೆಗೆ ಇಳಿಸುವುದಾದರೆ, ವಿಶ್ವದ ನೂರಾರು ದೇಶಗಳನ್ನೂ ಕೆಳದರ್ಜೆಗೆ ಇಳಿಸಬೇಕು. ತುಲನಾತ್ಮಕ ರೇಟಿಂಗ್ ಕೂಡಾ ಒಂದೇ ಆಗಿರುತ್ತದೆ ಎಂದು ಚಿದಂಬರಂ ಹೇಳಿದ್ದಾರೆ.
ಸರಕಾರವನ್ನು ಭಾರತದ ಜನತೆ ಕ್ಷಮಿಸಬಹುದು. ಆದರೆ ಸರಕಾರ ತಮ್ಮ ವಿಷಯದಲ್ಲಿ ನಡೆದುಕೊಂಡ ರೀತಿಯನ್ನು ಅವರೆಂದಿಗೂ ಮರೆಯುವುದಿಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆಗೆ 4 ವರ್ಷಗಳ ಅವಧಿಯಿದೆ ಎಂಬ ಧೈರ್ಯದಿಂದ ಕೇಂದ್ರ ಸರಕಾರ ಹೀಗೆ ಮಾಡುತ್ತಿದೆ. ಆದರೆ ಭಾರತದ ಜನತೆ ಮೂರ್ಖರಲ್ಲ. ಕಳೆದ ಎರಡು ವರ್ಷದಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಮತ್ತು ಈಗ ಅಭೂತಪೂರ್ವ ತೊಂದರೆ ಎದುರಾಗಿದೆ. ಇದನ್ನು ಅವರು ನಾಲ್ಕು ವರ್ಷದ ಬಳಿಕವೂ ನೆನಪಿನಲ್ಲಿರಿಸಿಕೊಳ್ಳುತ್ತಾರೆ ಎಂದರು.
ಸರಕಾರದ ಆತ್ಮನಿರ್ಭರತೆ ಉಪಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ವಾವಲಂಬನೆಯ ಬಗ್ಗೆ ಯಾರದ್ದೂ ದೂರು ಇಲ್ಲ. ಪ್ರತೀ ದೇಶವೂ ಸಾಧ್ಯವಿದ್ದಷ್ಟು ಮಟ್ಟಿಗೆ ಸ್ವಾವಲಂಬಿಯಾಗಲು ಬಯಸುತ್ತದೆ. ಆದರೆ ಜಗತ್ತಿನಿಂದ ವಿಮುಖರಾಗುವುದು ಎಂದು ಇದರರ್ಥವಲ್ಲ. ಓರ್ವ ವ್ಯಕ್ತಿ ಸ್ಪರ್ಧಾತ್ಮಕ ಮನೋಭಾವ ಹೊಂದಿರಬೇಕು. ಆದರೆ ದಕ್ಷತೆ, ಪೈಪೋಟಿ, ವಿಶ್ವದ ಒಂದು ಭಾಗವಾಗಿರುವುದನ್ನು ತ್ಯಜಿಸಿ ಸ್ವಾವಲಂಬಿಯಾಗುವುದರಲ್ಲಿ ಅರ್ಥವಿಲ್ಲ ಎಂದರು.
ಈಗಿನ ಸರಕಾರ ಅರ್ಥಶಾಸ್ತ್ರಜ್ಞರ ಮತ್ತು ತಜ್ಞರ ಸಲಹೆ ಮತ್ತು ಶಿಫಾರಸುಗಳನ್ನು ಪರಿಗಣಿಸುವುದಿಲ್ಲ ಎಂದು ಅಸಮಾಧಾನ ಸೂಚಿಸಿದ ಅವರು, 2020-21ರ ಸಾಲಿನಲ್ಲಿ ದೇಶದ ಆರ್ಥಿಕತೆ ಬಣ್ಣಗೆಡಲಿದ್ದು ಮಂಕಾಗುವ ಸೂಚನೆಗಳಿವೆ ಎಂದರು.







