ಟೀಮ್ ಬಿ-ಹ್ಯೂಮನ್, ಹಿದಾಯ ಫೌಂಡೇಶನ್, ಟೀಂ ಬ್ರದರ್ಸ್ ವತಿಯಿಂದ ರಮಝಾನ್ ಕಿಟ್ ವಿತರಣೆ

ಮಂಗಳೂರು : ಟೀಮ್ ಬಿ-ಹ್ಯೂಮನ್, ಹಿದಾಯ ಫೌಂಡೇಶನ್ ಮತ್ತು ಟೀಂ ಬ್ರದರ್ಸ್ ವತಿಯಿಂದ ಕಸಬಾ ಬೆಂಗರೆಯ 150 ಕುಟುಂಬಗಳಿಗೆ ಇಂದು ರಮಝಾನ್ ಕಿಟ್ ವಿತರಿಸಲಾಯಿತು.
ದ.ಕ. ಜಿಲ್ಲೆಯಾದ್ಯಂತ ರಮಝಾನ್ ಕಿಟ್ ಮತ್ತು ಕೋವಿಡ್ ಕಿಟ್ ವಿತರಣೆ ನಡೆಸುತ್ತಿರುವ ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್ ಜಿಲ್ಲಾ ಎನ್ ಜಿ ಒ ಕಾರ್ಡಿನೇಷನ್ ಕಮಿಟಿ ಸಹಯೋಗದೊಂದಿಗೆ ಕಸಬಾ ಬೆಂಗರೆಯ ಬಡ ಕುಟುಂಬಗಳಿಗಾಗಿ 150 ರಮಝಾನ್ ಕಿಟ್ ಅನ್ನು ಜಮಾತ್ ಗೆ ಹಸ್ತಾಂತರಿಸಲಾಯಿತು.
ದ.ಕ ಜಿಲ್ಲೆಯಾದ್ಯಂತ 1500 ರಮಝಾನ್ ಕಿಟ್ ಮತ್ತು ಎಲ್ಲಾ ಜಾತಿ ಧರ್ಮದವರಿಗೆ 1550 ಕೋವಿಡ್ ಕಿಟ್ ನ್ನು ವಿತರಿಸಿದ ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್ ಒಟ್ಟು 3000 ಕ್ಕಿಂತ ಹೆಚ್ಚು ಅರ್ಹ ಕುಟುಂಬಗಳಿಗೆ ದಿನ ಬಳಕೆಯ ದಿನಸಿ ವಸ್ತುಗಳ ಕಿಟ್ ನೀಡಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಿದೆ.
ಕಸಬಾ ಬೆಂಗರೆ ಪ್ರದೇಶದಲ್ಲಿ ಹಿದಾಯ ಫೌಂಡೇಶನ್ ಹಲವು ವರ್ಷಗಳಿಂದ ಅರ್ಹ ಕುಟುಂಬಗಳಿಗೆ ಮಾಸಿಕ ರೇಷನ್ ಮತ್ತು ವೈದ್ಯಕೀಯ ನೆರವು ನೀಡುತ್ತಾ ಬಂದಿದೆ.
ಈ ಬಗ್ಗೆ ಮಾತನಾಡಿದ ಟೀಮ್ ಬಿ-ಹ್ಯೂಮನ್ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್, ಜಿಲ್ಲೆಯ ಆಯಾ ತಾಲೂಕಿನಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಮತ್ತು ಜಮಾಅತ್ ಗಳನ್ನು ನಮ್ಮ ಸಂಸ್ಥೆಯ ಸದಸ್ಯರು ಸರ್ವೇ ನಡೆಸಿದ್ದರಿಂದ ಅರ್ಹ ಫಲಾನುಭವಿ ಕುಟುಂಬಗಳಿಗೆ ರಮಝಾನ್ ಕಿಟ್ ತಲುಪಿಸಲು ನಮಗೆ ಸಾಧ್ಯವಾಗಿದೆ. ನಮಗೆ ಕಷ್ಟದಲ್ಲಿರುವ ಕುಟುಂಬಗಳ ಬಗ್ಗೆ ಮಾಹಿತಿ ನೀಡಿದಾಗ ಸಾಧ್ಯವಾದಷ್ಟು ನೆರವುಗಳನ್ನು ನಾವು ನೀಡಿದ್ದೇವೆ. ಜಿಲ್ಲೆಯ ಹಲವು ಕಡೆಗಳಿಗೆ ಆರ್ಥಿಕವಾಗಿ ಹಿಂದುಳಿದ ಮತ್ತು ಬಡ ಕುಟುಂಬಗಳಿಗೆ ಈದ್ ದಿನದಂದು ಈದ್ ಕಿಟ್ ನೀಡುವ ಬಗ್ಗೆ ಚಿಂತನೆಯು ನಡೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿದಾಯ ಫೌಂಡೇಶನ್ ಸ್ಥಾಪಕಾಧ್ಯಕ್ಷರಾದ ಎಚ್.ಕೆ. ಖಾಸಿಂ ಅಹ್ಮದ್, ಝಿಯಾವುದ್ದೀನ್ ಹಿದಾಯ ಫೌಂಡೇಶನ್, ಅಲ್ತಾಫ್ ಬಿ-ಹ್ಯೂಮನ್, ಟೀಂ ಬ್ರದರ್ಸ್ ನ ನಿಶಾನ್ ಮತ್ತು ಶಾಬಿಕ್ ಉಪಸ್ಥಿತರಿದ್ದರು.










