ಮೂಡುಬಿದಿರೆ: ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಶವವಾಗಿ ಪತ್ತೆ

ಮೂಡುಬಿದಿರೆ, ಮೇ 21: ಮುಂಬೈಯಿಂದ ಆಗಮಿಸಿದ ಹಿನ್ನೆಲೆಯಲ್ಲಿ ಕ್ವಾರಂಟೈನ್‌ಗೆ ಒಳಗಾದ ಎರಡು ಗಂಟೆಯೊಳಗೆ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮೂಡುಬಿದಿರೆ ತಾಲೂಕಿನ ಕಡಂದಲೆಯಲ್ಲಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿರುವುದು ವರದಿಯಾಗಿದೆ.
ಕಡಂದಲೆ ನಿವಾಸಿ ದಯಾನಂದ ಪೂಜಾರಿ ಮೃತಪಟ್ಟವರು. ಇವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ದಯಾನಂದ ಪೂಜಾರಿ ಸೇರಿದಂತೆ ಅಣ್ಣ ತಮ್ಮಂದಿರು ಮೂವರು ಮುಂಬೈಯಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರೆನ್ನಲಾಗಿದೆ. ಊರಿಗೆ ಮರಳಿದ್ದ ಅವರನ್ನು ಬುಧವಾರ ರಾತ್ರಿ ಒಂದು ಗಂಟೆ ಸುಮಾರಿಗೆ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಬಳಿಕ ಮುಂಜಾನೆ 3 ಗಂಟೆ ಸುಮಾರಿಗೆ ದಯಾನಂದ ಪೂಜಾರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆನ್ನಲಾಗಿದೆ.
ಆರ್ಥಿಕ ತೊಂದರೆ, ಕೋವಿಡ್-19 ಬಗ್ಗೆ ಹೆದರಿದ್ದ ದಯಾನಂದ ಪೂಜಾರಿ ಮುಂದೆ ಜೀವನೋಪಾಯಕ್ಕಾಗಿ ಏನು ಕೆಲಸ ಮಾಡುವುದೆಂದು ಗೊಂದಲದಲ್ಲಿದ್ದು, ಈ ಬಗ್ಗೆ ಸಹೋದರರ ಬಳಿ ಹೇಳಿಕೊಂಡಿದ್ದರೆನ್ನಲಾಗಿದೆ. ಇದೇ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ದಯಾನಂದ ಪೂಜಾರಿ ಅವರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.
ಸ್ಥಳಕ್ಕೆ ಧಾವಿಸಿರುವ ಮೂಡುಬಿದಿರೆ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







