ಕೊರೋನ: ಉಡುಪಿಗೆ ಕಾದಿದೆಯೇ ಇನ್ನಷ್ಟು ಆತಂಕ ?
ಬಿಸಿತುಪ್ಪವಾಗಿ ಕಾಯುತ್ತಿವೆ 987 ಮಾದರಿಗಳು

ಉಡುಪಿ, ಮೇ21: ಹೊರರಾಜ್ಯಗಳ ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರದ ಮುಂಬಯಿಯಲ್ಲಿದ್ದ ಕರಾವಳಿಗರಿಗೆ ಊರಿಗೆ ಮರಳಲು ಅವಕಾಶ ನೀಡಿರುವ ಬಳಿಕ ಹಾಗೂ ವಿದೇಶಗಳಲ್ಲಿರುವ ಕನ್ನಡಿಗರಿಗೆ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಿದ ಮೇಲೆ ಕೊರೋನ ವೈರಸ್ ಸೋಂಕಿಗೆ ಸಂಬಂಧಿಸಿ ಅದುವರೆಗೆ ನೆಮ್ಮದಿಯಿಂದಿದ್ದ ಉಡುಪಿ ಜಿಲ್ಲೆಯ ಜನರ ಆತಂಕ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ.
ಕಳೆದ ಮಾ.29ರವರೆಗೆ ಉಡುಪಿಯಲ್ಲಿ ಕಾಣಿಸಿಕೊಂಡಿದ್ದು ಮೂರು ಕೊರೋನ ಪ್ರಕರಣಗಳು ಮಾತ್ರ. ಅನಂತರ ಮೇ 15ರವರೆಗೆ ಇಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿರಲಿಲ್ಲ. ಆದರೆ ಮೇ 15ರಂದು ದುಬೈಯಿಂದ ಆಗಮಿಸಿದ ಆರು ಮಂದಿಯಲ್ಲಿ ಕೊರೋನ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಮೇ 20ರವರೆಗೆ ಮತ್ತೆ ಹೊಸದಾಗಿ 18 ಪ್ರಕರಣಗಳು ವರದಿಯಾಗಿವೆ.
ಜಿಲ್ಲೆಯಲ್ಲಿ ಈವರೆಗೆ ದುಬೈಯಿಂದ ಬಂದ ಎಂಟು, ಮುಂಬಯಿಯಿಂದ ಬಂದ 12 ಹಾಗೂ ಕೇರಳದ ತಿರುವನಂತಪುರಂಗೆ ಭೇಟಿ ನೀಡಿದ ಒಬ್ಬ ಸೇರಿ ಒಟ್ಟು 21 ಮಂದಿಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಿಂದ ವರದಿಯಾಗಿರುವ ಮತ್ತೊಂದು ಪ್ರಕರಣ ಮೇ 16ರಂದು ಮಣಿಪಾಲದ ಕೆಎಂಸಿಗೆ ಕ್ಯಾನ್ಸರ್ ಚಿಕಿತ್ಸೆಗೆಂದು ಬಂದು ಕೊರೋನ ಪಾಸಿಟಿವ್ ಆದ 17ರ ಹರೆಯದ ಬಾಲಕಿಯದ್ದು.
ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳ ಅನುಮಾನ ನಿಜವಾದರೆ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಮುಂಬಯಿಯಿಂದ ಬಂದಿರುವವರ ಜೊತೆಗೆ ಎರಡನೇ ಕಂತಿನಲ್ಲಿ ದುಬೈಯಿಂದ ಬಂದಿರುವ 49 ಮಂದಿ ಉಡುಪಿ ಮತ್ತು ಮಣಿಪಾಲಗಳ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಇವರ ವರದಿ ಇಂದು ಅಥವಾ ನಾಳೆ ಹೊರಬೀಳುವ ನಿರೀಕ್ಷೆ ಇದೆ.
ಇದರೊಂದಿಗೆ ನಿನ್ನೆ ರಾತ್ರಿ ಮಸ್ಕತ್‌ನಿಂದ ಮಂಗಳೂರಿಗೆ ಬಂದಿರುವ ಪ್ರಯಾಣಿಕರಲ್ಲಿ 21 ಮಂದಿ ಉಡುಪಿ ಜಿಲ್ಲೆಗೆ ಆಗಮಿಸಿದ್ದು, ಇವರನ್ನು ಸಹ ಹೊಟೇಲ್ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಇವರ ವರದಿಯೂ ಇನ್ನೆರಡು ದಿನಗಳಲ್ಲಿ ಬರಲಿದೆ. ಇದರೊಂದಿಗೆ ಈಗಾಗಲೇ ಪಾಸಿಟಿವ್ ಬಂದಿರುವ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದ ನೂರಾರು ಮಂದಿಯ ಗಂಟಲು ದ್ರವದ ಮಾದರಿಗಳ ಪರೀಕ್ಷೆ ಇಂದು-ನಾಳೆ ಬರಬಹುದು. ಇವೆಲ್ಲವೂ ಬಿಸಿತುಪ್ಪದಂತೆ ನಮ್ಮ ಮುಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲೆಯ ಆರೋಗ್ಯ ಇಲಾಖೆ ನಿನ್ನೆ ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್‌ನಲ್ಲಿ ಒಟ್ಟು 987 ಮಾದರಿಗಳ ಪರೀಕ್ಷಾ ವರದಿ ಇನ್ನು ಬರಬೇಕಿದೆ. ಇವುಗಳ ಪರೀಕ್ಷೆ ಮಣಿಪಾಲ ಹಾಗೂ ಮಂಗಳೂರಿನ ಪ್ರಯೋಗಾಲಯದಲ್ಲಿ ನಡೆಯಲಿದ್ದು, ಇಂದು ಅವುಗಳಲ್ಲಿ ಹೆಚ್ಚಿನ ವರದಿ ಕೈಸೇರಬಹುದು ಎಂಬ ನಿರೀಕ್ಷೆ ಅವರದು.







