ಹೆಬ್ರಿಯಲ್ಲಿ ಕೊರೋನ ಸೋಂಕು: ಪ್ರದೇಶ ಸೀಲ್‌ಡೌನ್

ಹೆಬ್ರಿ, ಮೇ 21: ಹೆಬ್ರಿಯ ಹೊಟೇಲೊಂದರಲ್ಲಿ ಕ್ವಾರಂಟೈನ್‌ನಲ್ಲಿದ್ದ ಮುಂಬಯಿಯಿಂದ ಬಂದ ಇಬ್ಬರು ಮಹಿಳೆಯರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಹಾಗೂ ಹೆಬ್ರಿಯ ಕುಚ್ಚೂರು ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಹೆಬ್ರಿಯ ಈ ರೆಸಿಡೆನ್ಸಿ ಹಾಗೂ ರೆಸಿಡೆನ್ಸಿ ಸಂಪರ್ಕ ರಸ್ತೆಯನ್ನು ಸುಮಾರು 300 ಮೀ.ನಷ್ಟು ಸೀಲ್‌ಡೌನ್ ಮಾಡಲಾಗಿದ್ದು, ಇದರ ಆಸುಪಾಸು ಯಾರಿಗೂ ಸುಳಿಯಲು ಪೊಲೀಸರು ಅವಕಾಶ ನೀಡುತ್ತಿಲ್ಲ. ಸಾರ್ವಜನಿಕರಿಗೆ ಈ ಪ್ರದೇಶ ನಿಷೇಧಿತವಾಗಿದೆ.
ಮುಂಬಯಿಯಿಂದ ಬಂದ ಈ ಮಹಿಳೆಯರ ಗಂಟಲು ದ್ರವ ಮಾದರಿ ಬುಧವಾರ ಪಾಸಿಟಿವ್ ಆಗಿದ್ದು, ಜಿಲ್ಲಾಡಳಿತ ಇವರನ್ನು ಈಗಾಗಲೇ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಿದೆ.
31 ವರ್ಷ ಪ್ರಾಯದ ಮಹಿಳೆಗೆ (ಪಿ 1436) 24 ಮಂದಿ ಹಾಗೂ 47ರ ಹರೆಯದ ಮಹಿಳೆಗೆ (ಪಿ1449) ಒಟ್ಟು 12 ಮಂದಿ ಪ್ರಥಮ ಸಂಪರ್ಕಿತರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಗುರುತಿಸಿದ್ದು, ಇವರಿಗೂ ಕ್ವಾರಂಟೈನ್ ವಿಧಿಸಲಾಗಿದೆ ಅಲ್ಲದೇ ಅವರ ಮಾದರಿ ಪರೀಕ್ಷೆಗೂ ಕ್ರಮಕೈಗೊಳ್ಳಲಾಗಿದೆ.












