ಕೊರೋನ ನಿಯಂತ್ರಿಸುವಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಯಶಸ್ವಿ; ವಿಪಕ್ಷಗಳಿಗೆ ಟೀಕಿಸುವುದೇ ಚಾಳಿ: ಸಚಿವ ಈಶ್ವರಪ್ಪ

ಮೈಸೂರು, ಮೇ 21: ಕೊರೋನ ನಿಯಂತ್ರಣ ಮಾಡಿದ ಮೋದಿ ಕ್ತಮದ ಬಗ್ಗೆ ಈಡೀ ವಿಶ್ವವೇ ಮೆಚ್ಚಿದರೂ ಬೋಗಸ್ ವಿರೋಧ ಪಕ್ಷದ ನಾಯಕರುಗಳು ಟೀಕೆ ಮಾಡುತ್ತಿದ್ದಾರೆ. ಇವರುಗಳು ಅಯೋಗ್ಯರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಳಿ ನಡೆಸಿದ್ದಾರೆ.
ನಗರದ ಸುತ್ತೂರು ಮಠಕ್ಕೆ ಗುರುವಾರ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಕೊರೋನ ನಿಯಂತ್ರಣ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಶಸ್ವಿಯಾಗಿವೆ. ಆದರೆ ವಿರೋಧ ಪಕ್ಷದ ನಾಯಕರುಗಳಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇವರಿಗೆ ಟೀಕೆ ಮಾಡುವುದೇ ಚಾಳಿಯಾಗಿದೆ ಎಂದು ಹರಿಹಾಯ್ದರು.
ವಿರೋಧ ಪಕ್ಷಗಳು ಬರೀ ಟೀಕೆ ಮಾಡುವುದೇ ನಮ್ಮ ಕೆಲಸ ಎಂದುಕೊಂಡಿವೆ, ಟೀಕೆ ಮಾಡುವ ಮುನ್ನ ಯಾವ ರೀತಿ ಕೆಲಸ ಆಗಿದೆ ಎಂದು ನೋಡಬೇಕು. ನರೇಗ ದಲ್ಲಿ ನೂರು ದಿನ ಕೆಲಸ ನೀಡಲಾಗುತಿತ್ತು, ಮೋದಿ ಅವರು 150 ದಿನ ಮಾಡಿದ್ದಾರೆ. ಗ್ರಾಪಂಗೆ ಆಡಳಿತಾಧಿಕಾರಿ ನೇಮಕಕ್ಕೆ ವಿರೋಧ ಮಾಡುತ್ತಿದ್ದಾರೆ. ಎಪಿಎಂಸಿ ಕಾಯ್ದೆಗೂ ವಿರೋಧ ಮಾಡುತ್ತಿದ್ದಾರೆ. ಅವರಿಗೆ ಸೋನಿಯಾ ಗಾಂಧಿ ಮೆಚ್ಚಿಸಿಕೊಳ್ಳುವುದೇ ಆಗಿದೆ ಎಂದು ಈಶ್ವರಪ್ಪ ಟೀಕಿಸಿದ್ದಾರೆ.





