ಮಸ್ಕತ್, ದಮಾಮ್, ಸ್ಯಾನ್ ಫ್ರಾನ್ಸಿಸ್ಕೊದಿಂದ ಬೆಂಗಳೂರಿಗೆ 317 ಅನಿವಾಸಿ ಭಾರತೀಯರ ಆಗಮನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 21: ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೊ, ಮಸ್ಕತ್ ಹಾಗೂ ದಮಾಮ್ ನಿಂದ ಒಟ್ಟು 317 ಅನಿವಾಸಿ ಭಾರತೀಯರು ಕೇಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೊದಿಂದ ಬೆಳಗ್ಗೆ 8ನೇ ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು ಸೇರಿದಂತೆ ಒಟ್ಟು 117 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದರೆ, ಮಸ್ಕತ್ ಹಾಗೂ ದಮಾಮ್ನಿಂದ ಬುಧವಾರ ರಾತ್ರಿ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಟ್ಟು 200 ಅನಿವಾಸಿ ಭಾರತೀಯರು ಆಗಮಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾಹಿತಿ ನೀಡಿದ್ದಾರೆ.
ಸ್ಕ್ಯಾನ್ ಫ್ರಾನ್ಸಿಸ್ಕೊದಿಂದ ಏರ್ ಇಂಡಿಯಾ ವಿಮಾನದಲ್ಲಿ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ 117 ಪ್ರಯಾಣಿಕರನ್ನು ಸರಕಾರದ ನಿರ್ದೇಶನದಂತೆ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಯಾವುದೇ ಪ್ರಯಾಣಿಕರಲ್ಲಿ ಕೊರೋನ ವೈರಾಣು ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಈ ಎಲ್ಲ 117 ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್ಗಾಗಿ ಹೊಟೇಲ್ಗಳಿಗೆ ಬಿಎಂಟಿಸಿ ಬಸ್ಗಳ ಮೂಲಕ ಕಳುಹಿಸಿಕೊಡಲಾಗಿದ್ದು, ಕ್ವಾರಂಟೈನ್ ವೆಚ್ಚವನ್ನು ಅವರುಗಳೇ ಭರಿಸಲಿದ್ದಾರೆ ಎಂದಿದ್ದಾರೆ.
ದಮಾಮ್ ನಿಂದ 85 ಹಾಗೂ ಮಸ್ಕತ್ ನಿಂದ 115 ಪ್ರಯಾಣಿಕರು ಆಗಮಿಸಿದ್ದಾರೆ. ದಮಾಮ್ ನಿಂದ ಬಂದ ಪ್ರಯಾಣಿಕರಲ್ಲಿ ಒಬ್ಬರಿಗೆ ಕೊರೋನ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್ಗಾಗಿ ನಿಗದಿತ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಉಳಿದ ಯಾವುದೇ ಪ್ರಯಾಣಿಕರಲ್ಲಿ ಕೊರೋನ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದು ರವೀಂದ್ರ ಅವರು ಸ್ಪಷ್ಟಪಡಿಸಿದ್ದಾರೆ.