ಉಡುಪಿ: ದುಬೈನ 1, ಹೊರರಾಜ್ಯಗಳ 25 ಪ್ರಕರಣಗಳು ಪಾಸಿಟಿವ್
ಕೊರೋನ ವೈರಸ್

ಉಡುಪಿ, ಮೇ 21: ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್‌ನ ಸಂಖ್ಯೆ ನಾಗಾಲೋಟದಲ್ಲಿ ಓಡುತ್ತಿವೆ. ಗುರುವಾರ ಒಂದೇ ದಿನದಲ್ಲಿ ಒಟ್ಟು 26 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇವುಗಳಲ್ಲಿ ಒಂದು ದುಬೈ ಯಿಂದ ಆಗಮಿಸಿದ ಯುವಕನದ್ದಾದರೆ, ಉಳಿದ 25 ಮಹಾರಾಷ್ಟ್ರ, ತೆಲಂಗಾಣ ಹಾಗೂ ಕೇರಳದಿಂದ ಜಿಲ್ಲೆಗೆ ಬಂದವರದ್ದಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಪಾಸಿಟಿವ್ ಪ್ರಕರಣಗಳ ಸಂಖ್ಯೆ 48 (ಚಿತ್ರದುರ್ಗದ ಬಾಲಕಿಯದ್ದು ಸೇರಿ)ಕ್ಕೇರಿದೆ.
ಆದರೆ ಅತ್ಯಂತ ಕಳವಳದ ವಿಷಯವೆಂದರೆ ಇಂದು ಪತ್ತೆಯಾದ 26 ಪ್ರಕರಣಗಳಲ್ಲಿ 15 ಪ್ರಕರಣಗಳು ಪುಟ್ಟ ಮಕ್ಕಳದ್ದಾಗಿವೆ. ಉಳಿದಂತೆ ಏಳು ಮಂದಿ ಪುರುಷರು ಹಾಗೂ ನಾಲ್ವರು ಮಹಿಳೆಯರಲ್ಲೂ ಸೋಂಕು ಕಂಡು ಬಂದಿದೆ. 15 ಮಂದಿಯಲ್ಲಿ 10 ಬಾಲಕರು ಹಾಗೂ ಐವರು ಬಾಲಕಿಯರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇದರೊಂದಿಗೆ ಮಹಾರಾಷ್ಟ್ರದಿಂದ ಬಂದ ಬೈಂದೂರು ತಾಲೂಕು ಶಿರೂರು ಮೂಲದ ತಾಯಿ (35) ಮತ್ತು ಒಂದು ವರ್ಷದ ಮಗು ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಕ್ವಾರಂಟೈನ್‌ನಲ್ಲಿದ್ದು, ಅವರಲ್ಲೂ ಇಂದು ಕೊರೋನ ಸೋಂಕು ಪತ್ತೆಯಾಗಿದೆ. ಅವರೀಗ ಕಾರವಾರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಇಂದು ಕೊರೋನಕ್ಕೆ ಪಾಸಿಟಿವ್ ಆದವರಲ್ಲಿ ಮಹಾರಾಷ್ಟ್ರದಿಂದ ಬಂದವರು 21 ಮಂದಿಯಾದರೆ, ಮೂವರು ತೆಲಂಗಾಣದವರು. ಇನ್ನೊಬ್ಬರು ಕೇರಳದಿಂದ ಮಣಿಪಾಲದ ಕೆಎಂಸಿಯಲ್ಲಿ ಚಿಕಿತ್ಸೆಗಾಗಿ ಪತಿಯೊಂದಿಗೆ ಬಂದ ಮಹಿಳೆ ಯಾಗಿದ್ದಾರೆ. ಮತ್ತೊಬ್ಬ ಯುವಕ ದುಬೈಯಿಂದ ಬಂವರು ಎಂದು ಅವರು ವಿವರಿಸಿದರು.
ಗುರುವಾರ ಪತ್ತೆಯಾದ 26 ಮಂದಿ ಕೊರೋನ ಸೋಂಕಿತರಲ್ಲಿ 15 ಮಂದಿ ಬೈಂದೂರು ತಾಲೂಕಿನವರು, ಐವರು ಕುಂದಾಪುರ ತಾಲೂಕಿನ ವರು, ಮೂವರು ಕಾರ್ಕಳ ಹಾಗೂ ಮೂವರು ಉಡುಪಿ ತಾಲೂಕಿನವರು. ಈ 26 ಮಂದಿಯಲ್ಲಿ 25 ಮಂದಿಯನ್ನು ಉಡುಪಿ ನಗರದಲ್ಲಿರುವ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೇರಳದಿಂದ ಚಿಕಿತ್ಸೆಗೆ ಬಂದ ಪತಿ ಕೊರೋನಕ್ಕೆ ನೆಗೆಟಿವ್ ಆದರೆ, ಪತ್ನಿ ಪಾಸಿಟಿವ್ ಆಗಿದ್ದಾರೆ. ಇವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ಸೇರಿಸಲಾಗಿದೆ.
ದುಬೈಯಿಂದ ಮೇ 18ರಂದು ಊರಿಗೆ ಬಂದ 37ರ ಹರೆಯದ ಯುವಕ ಮೂಲತ: ಶಿರ್ವದವರು. ಇವರು ಮಣಿಪಾಲದ ಹೊಟೇಲ್ ಒಂದರಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಅವರನ್ನೀಗ ಉಡುಪಿ ಕೋವಿಡ್ ಆಸ್ಪತ್ರೆಗೆ ವರ್ಗಾಯಿ ಸಲಾಗಿದೆ ಎಂದು ಡಾ.ಸೂಡ ತಿಳಿಸಿದರು.
ಕೊರೋನ ಪಾಸಿಟಿವ್ ಕಂಡುಬಂದ 15 ಮಕ್ಕಳೆಲ್ಲರೂ 10 ವರ್ಷ ಪ್ರಾಯ ದೊಳಗಿನವರು. ಇವರಲ್ಲಿ ಗರಿಷ್ಠ 11 ಮಂದಿ ಬೈಂದೂರು ತಾಲೂಕಿನವರು. ಕುಂದಾಪುರ ತಾಲೂಕಿನ ಇಬ್ಬರು ಹಾಗೂ ಕಾರ್ಕಳ ತಾಲೂಕಿನ ಇಬ್ಬರು ಪುಟಾಣಿ ಮಕ್ಕಳು ಇಂದು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಇವರ ಪ್ರಾಯ 10, 9(ಇಬ್ಬರು), 7, 6(4), 5, 4(2), 3, 2(2) ಹಾಗೂ 1 ವರ್ಷವಾಗಿದೆ. ಉಳಿದಂತೆ 51, 33, 32, 33, 24, 21, 37ರ ಹರೆಯದ ಪುರುಷರು, 60, 26, 51, 32ರ ಹರೆಯದ ಮಹಿಳೆಯರು ಕೊರೋನಕ್ಕೆ ಪಾಸಿಟಿವ್ ಆಗಿದ್ದಾರೆ.
ಕುಂದಾಪುರದಲ್ಲಿ ಚಿಕಿತ್ಸೆಗೆ ಸಿದ್ಧತೆ
ಕಳೆದ ಒಂದು ವಾರದಿಂದ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಹಠಾತ್ ವೃದ್ಧಿಯಾಗಿದ್ದು, ಮುಂದೆ ಇದು ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವು ದರಿಂದ ಸೋಂಕಿತರ ಚಿಕಿತ್ಸೆಗೆ ಕುಂದಾಪುರ ಮತ್ತು ಕಾರ್ಕಳದಲ್ಲಿ ಎರಡು ಆಸ್ಪತ್ರೆಗಳನ್ನು ಸೋಂಕಿತರ ಚಿಕಿತ್ಸೆಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸೂಡ ತಿಳಿಸಿದರು.
ಉಡುಪಿಯಲ್ಲಿರುವ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಗರಿಷ್ಠ 120 ಮಂದಿಗೆ ಚಿಕಿತ್ಸೆ ನೀಡಬಹುದಾಗಿದೆ. ಇದಕ್ಕಾಗಿ ಈಗ ಕುಂದಾಪುರ ತಾಲೂಕು ಆಸ್ಪತ್ರೆಯ ಬಳಿ ಡಾ.ಜಿ.ಶಂಕರ್ ನಿರ್ಮಿಸಿರುವ ಕೊಟ್ಟಿರುವ ಮಹಿಳಾ ಘಟಕದಲ್ಲಿ 126 ಬೆಡ್‌ಗಳ ಚಿಕಿತ್ಸಾ ಘಟಕವನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸಿದ್ಧಪಡಿಸಲಾಗಿದೆ. ಅದೇ ರೀತಿ ಕಾರ್ಕಳ ತಾಲೂಕು ಆಸ್ಪತ್ರೆಯ ಹಳೆ ಕಟ್ಟಡದಲ್ಲೂ 90 ಬೆಡ್‌ಗಳ ಘಟಕವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಡಾ.ಸೂಡ ತಿಳಿಸಿದರು.







