ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ತೀವ್ರ ಹೋರಾಟ: ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ನಿರ್ಧಾರ

ಮಂಗಳೂರು, ಮೇ 21: ಸೆಂಟ್ರಲ್ ಮಾರುಕಟ್ಟೆಯಿಂದ ಎಪಿಎಂಸಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡ ವ್ಯಾಪಾರಸ್ಥರು ಅತಂತ್ರರಾಗಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ಸುಮಾರು 50 ಲಕ್ಷ ರೂ. ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಮೇ ಅಂತ್ಯದೊಳಗೆ ವ್ಯಾಪಾರಸ್ಥರಿಗೆ ಸೂಕ್ತ ಪರ್ಯಾಯ ವ್ಯವಸ್ಥೆಯ ಜತೆಗೆ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ತೀವ್ರತೆರನಾದ ಹೋರಾಟವನ್ನು ನಡೆಸಲು ನಿರ್ಧರಿಸಿರುವು ದಾಗಿ ಸೆಂಟ್ರಲ್ ವಾರುಕಟ್ಟೆ ವ್ಯಾಪಾಸ್ಥರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಸಂಘದ ಕಾರ್ಯಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕೊರೋನ ಸೋಂಕು ಹಿನ್ನೆಲೆಯಲ್ಲಿ ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹಣ್ಣು, ತರಕಾರಿ ಸಗಟು ವ್ಯಾಪಾರಸ್ಥರನ್ನು ಎಪಿಎಂಸಿಗೆ ಸ್ಥಳಾಂತರಗೊಳಿಸಿ ಎರಡು ತಿಂಗಳು ಕಳೆದರೂ ಪರ್ಯಾಯ ವ್ಯವಸ್ಥೆ ಒದಗಿಸಿಲ್ಲ. ಹಾಗಾಗಿ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಹಾಗೂ ನ್ಯೂ ಸೆಂಟ್ರಲ್ ಮಾರುಕಟ್ಟೆ ಶಾಪ್ ಓನರ್ಸ್ ಅಸೋಸಿಯೇಶನ್ ಸಮಾನ ಮನಸ್ಕ ರಾಜಕೀಯ ಪಕ್ಷಗಳು, ಸಂಘಟನೆಗಳ ಸಹಭಾಗಿತ್ವದಲ್ಲಿ ತೀವ್ರ ತೆರನಾದ ಹೋರಾಟವನ್ನು ನಡೆಸಲು ತೀರ್ಮಾನಿಸಿದೆ ಎಂದರು.
ಕೊರೋನ ಸೋಂಕಿನಿಂದ ಜಗತ್ತೇ ತತ್ತರಿಸಿದ್ದರೆ, ಲಾಕ್‌ಡೌನ್‌ನಿಂದಾಗಿ ಪ್ರತಿಯೊಬ್ಬರ ಬದುಕು ಸಂಕಷ್ಟದಲ್ಲಿದೆ. ಈ ನಡುವೆ ಸೆಂಟ್ರಲ್ ಮಾರುಕಟ್ಟೆಯ 598 ವ್ಯಾಪಾರಸ್ಥರನ್ನು ಕೊರೋನ ನೆಪದಲ್ಲಿ, ಸೆಂಟ್ರಲ್ ಮಾರುಕಟ್ಟೆಯ ನವೀಕರಣದ ಹೆಸರಿನಲ್ಲಿ ಪರ್ಯಾಯ ವ್ಯವಸ್ಥೆ ಮಾಡದೆ ಸ್ಥಳಾಂತರಿಸಿ ಕಳೆದೆರಡು ತಿಂಗಳಿನಿಂದ ಜಿಲ್ಲಾಡಳಿತ ವೌನ ಹಿಸಿದೆ ಎಂದು ಆರೋಪಿಸಿದರು.
ಸೆಂಟ್ರಲ್ ಮಾರುಕಟ್ಟೆ ದ.ಕ. ಜಿಲ್ಲೆಯ ಆರ್ಥಿಕತೆಯ ಜೀವನಾಡಿ. ಹಲವು ದಶಕಗಳಿಂದ ನಗದ ಹೃದಯಭಾಗದಲ್ಲಿರುವ 2 ಕಟ್ಟಡಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಲಾಗುತ್ತಿತ್ತು. ಕೊರೋನ ಹಿನ್ನೆಲೆಯಲ್ಲಿ ಎಪ್ರಿಲ್ 2ರಿಂದ 14ರವರೆಗೆ ಸಗಟು ವ್ಯಾಪಾರಸ್ಥರು ಮಾತ್ರ ತಮ್ಮ ವ್ಯಾಪಾರವನ್ನು ತಾತ್ಕಾಲಿಕ ನೆಲೆಯಲ್ಲಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸುವಂತೆ ಆದೇಶ ಹೊರಡಿಸಲಾಗಿತ್ತು. ಆದರೆ ಚಿಲ್ಲರೆ ವ್ಯಾಪಾರಸ್ಥರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಬಳಿಕ ಕಾಟಾಚಾರಕ್ಕೆ ವ್ಯಾಪಾರಸ್ಥರ ಸಭೆ ಆಯೋಜಿಸಿ ಜಿಲ್ಲಾಡಳಿತದ ತೀರ್ಮಾನ ವನ್ನೇ ವ್ಯಾಪಾರಸ್ಥರ ಮೇಲೆ ಹೇರಲಾಯಿತು. ವ್ಯಾಪಾರಸ್ಥರ ಅಹವಾಲಿಗೆ ಸ್ಪಂದನೆ ದೊರಕಲಿಲ್ಲ. ಬಳಿಕ ಸಂಸದರು, ಶಾಸಕರ ಸಮಕ್ಷಮದಲ್ಲಿ ಎಪಿಎಂಸಿ ಸಭಾಂಗಣದಲ್ಲಿ ಸಭೆ ನಡೆದು ಯಾವುದೇ ಎಪಿಎಂಸಿಗೆ ವ್ಯಾಪಾರ ಸ್ಥಳಾಂತರ ಬೇಡ ಎಂದು ವ್ಯಾಪಾರಸ್ಥರು ಒತ್ತಾಯಿಸಿದರು.
ಸಂಸದರು ಸ್ಮಾರ್ಟ್ ಸಿಟಿ ಯೋಜನೆಯಡಿ ಸೆಂಟ್ರಲ್ ಮಾರುಕಟ್ಟೆಯ ನೂತನ ಕಟ್ಟಡದ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಆದರೆ ಇದುವರವೆಗೆ ಅಧಿಕೃತವಾಗಿ ಸೆಂಟ್ರಲ್ ಮಾರುಕಟ್ಟೆಯ ನವೀಕರಣ ಯೋಜನೆಯ ಬಹಿರಂಗ ಹೇಳಿಕೆಯನ್ನು ನೀಡಿಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜನಾರ್ದನ ಸಾಲಿಾನ್ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದವರಿಗೆ ವ್ಯಾಪಾರವೇ ಇಲ್ಲ!
ಸೆಂಟ್ರಲ್ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಸೇರಿದಂತೆ ಹಲವು ವರ್ಷಗಳಿಂದ, ತಮ್ಮ ಹಿರಿಯರ ಕಾಲದಿಂದ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಲಾಕ್‌ಡೌನ್ ಸಡಿಲಗೊಂಡು ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಸತಾಗಿ ಅನೇಕರು ವ್ಯಾಪಾರ ಆರಂಭಿಸಿ ದ್ದರೂ, ಹಿಂದಿನಿಂದಲೂ ಅಧಿಕೃತವಾಗಿ ವ್ಯಾಪಾರ ಮಾಡಿ ಬದುಕುತ್ತಿದ್ದವರು ಕಂಗಾಲಾಗಿದ್ದಾರೆ. ಸೆಂಟ್ರಲ್ ಮಾರುಕಟ್ಟೆಯಲ್ಲಿದ್ದ ಬಹುತೇಕ ಚಿಲ್ಲರೆ ವ್ಯಾಪಾರಸ್ಥರು 2 ತಿಂಗಳಿನಿಂದ ವ್ಯಾಪಾರವಿಲ್ಲದೆ ಕಂಗಾಲಾಗಿದ್ದಾರೆ ಎಂದು ಸಂಘದ ಉಪಾಧ್ಯಕ್ಷೆ ಗ್ರೇಸಿ ಫೆರ್ಾಂಡಿಸ್ ಬೇಸರ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ನ್ಯೂ ಸೆಂಟ್ರಲ್ ಮಾರುಕಟ್ಟೆ ಶಾಪ್ ಓನರ್ಸ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಗಣೇಶ್, ಮುಖಂರಾದ ಮುಸ್ತಾಕ್ ಉಪಸ್ಥಿತರಿದ್ದರು.
ಬೀದಿ ಪಾಲಾಗಿರುವ ಚಿಲ್ಲರೆ ವ್ಯಾಪಾರಸ್ಥರು
ತಾತ್ಕಾಲಿಕ ನೆಲೆಯಲ್ಲಿ ಎಪಿಎಂಸಿಗೆ ಸ್ಥಳಾಂತರಗೊಂಡ ವ್ಯಾಪಾರಸ್ಥರು ಅಲ್ಲಿ ವಿಷಜಂತುಗಳ ಹಾವಳಿ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿರುವ ಜತೆಯಲ್ಲೇ ಸೆಂಟ್ರಲ್ ಮಾರುಕಟ್ಟೆಯಲ್ಲಿದ್ದ ಚಿಲ್ಲರೆ ವ್ಯಾಪಾರಸ್ಥರು ಕಳೆದ ಎರಡು ತಿಂಗಳಿನಿಂದ ಬೀದಿ ಪಾಲಾಗಿದ್ದಾರೆ. ಲಾಕ್‌ಡೌನ್ ಸಡಿಲಿಕೆಗೊಂಡು ಬಹುತೇಕವಾಗಿ ಎಲ್ಲಾ ವ್ಯಾಪಾರ, ವಹಿವಾಟುಗಳು ನಿಧಾನಗತಿಯಲ್ಲಿ ಆರಂಭವಾಗಿದ್ದರೂ, ಸೆಂಟ್ರಲ್ ಮಾರುಕಟ್ಟೆಯಲ್ಲಿದ್ದ ಇಲೆಕ್ಟ್ರಾನಿಕ್, ಜವಳಿ, ದಿನಸಿ ಸೇರಿದಂತೆ ಇತರ ಚಿಲ್ಲರೆ ವ್ಯಾಪಾರಸ್ಥರಿಗೂ ವ್ಯಾಪಾರಕ್ಕೆ ಅವಕಾಶ ನೀಡಲಾಗಿಲ್ಲ. ಸೆಂಟ್ರಲ್ ಮಾರುಕಟ್ಟೆಯಲ್ಲಿರುವ 131 ಸಗಟು, 346 ಚಿಲ್ಲರೆ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಹೊಸ ಕಟ್ಟಡ ನಿರ್ಮಾಕ್ಕೆ ಮುಂದಾಗುವುದು ಬೇಡ. ಸದ್ಯದ ಪರಿಸ್ಥಿತಿಯಲ್ಲಿ ವ್ಯಾಪಾರಕ್ಕೆ ತೀರಾ ಅನಾನುಕೂಲವಾಗಿರುವ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ನಲ್ಲಿ ಸಗಟು ವ್ಯಾಪಾರ ಮುಂದುವರಿಸುವ ಕ್ರಮ ಕೈಬಿಡಬೇಕು.
-ಸುನಿಲ್ ಕುಮಾರ್ ಬಜಾಲ್, ಕಾರ್ಯಾಧ್ಯಕ್ಷರು, ಸೆಂಟ್ರಲ್ ಮಾರಕುಟ್ಟೆ ವ್ಯಾಪಾರಸ್ಥರ ಸಂಘ
ವ್ಯಾಪಾರಸ್ಥರ ಸಂಕಷ್ಟಗಳ ಕುರಿತು ಜಿಲ್ಲಾಡಳಿತ ಗಮನ ಹರಿಸಬೇಕು. ಎಪಿಎಂಸಿಯನ ಮೂಲಭೂತ ಸೌಕರ್ಯದ ಕೊರತೆ ಕುರಿತಂತೆ ಸಂಸದರು, ಶಾಸಕರ ನೇತೃತ್ವದಲ್ಲಿ ಸಭೆ ನಡೆದ ಸಂದರ್ಭ ನಾಲ್ಕೈದು ದಿನಗಳಲ್ಲಿ ಸಭೆ ಕರೆಯುವುದಾಗಿ ಭರವಸೆ ನೀಡಿದ್ದ ಸಂಸದರು, 21 ದಿನಗಳಾದರೂ ಸಭೆ ನಡೆಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ಬಳಿ ಮಾತನಾಡಲು ಹೋದರೆ ಅವರಿಗೆ ವಿಷಯವೇ ಗೊತ್ತಿಲ್ಲ ಅನ್ನುತ್ತಾರೆ.
-ಅನಿಲ್ ಕುಮಾರ್, ಗೌರವ ಸಲಹೆಗಾರರು, ಸೆಂಟ್ರಲ್ ಮಾರಕುಟ್ಟೆ ವ್ಯಾಪಾರಸ್ಥರ ಸಂಘ.
ತರಕಾರಿ, ಹಣ್ಣು ವ್ಯಾಪಾರಕ್ಕೆ ಎಪಿಎಂಸಿ ಸೂಕ್ತ ಸ್ಥಳವಲ್ಲ
ಎಪಿಎಂಸಿ ಸುತ್ತಮುತ್ತ ಹಲವಾರು ರಾಸಾಯನಿಕ ಕಾರ್ಖಾನೆಗಳಿವೆ. ಎಪಿಎಂಸಿಯ ತಡೆಗೋಡೆಯನ್ನು ತಾಗಿಕೊಂಡು ಕೈಗಾರಿಕಾ ವಲಯವಿದೆ. ಅದು ಹಣ್ಣುಹಂಪಲು ವ್ಯಾಪಾರಕ್ಕೆ ಸೂಕ್ತವಾದ ಸ್ಥಳವೇ ಅಲ್ಲ. ಬೆಳಗ್ಗೆ 3 ಗಂಟೆಯ ವೇಳೆಗೆ ಸಗಟು ವ್ಯಾಪಾರ ಆರಂಭಗೊಳ್ಳುವುದರಿಂದ ವಿಷಜಂತುಗಳಿಂದ ತುಂಬಿರುವ ಎಪಿಎಂಸಿಯಲ್ಲಿ ಸರಕನ್ನು ಇರಿಸಲು ಭದ್ರತೆಯ ವ್ಯವಸ್ಥೆ ಇಲ್ಲ. ಎಪಿಎಂಸಿಯ ಗೋದಾಮಿನಲ್ಲಿ ಶಟರ್ ಆಗಲಿ, ಮೇಲ್ಛಾವಣಿಯಾಗಲಿ ಸರಿ ಇಲ್ಲ. ಅಲ್ಲಿ ಮಾರಾಟ ಮಾಡಿ ಉಳಿದ ಪದಾರ್ಥಗಳನ್ನು ತೆಗೆದಿರಿಸುವಂತಿಲ್ಲ. ಸೆಂಟ್ರಲ್ ಮಾರುಕಟ್ಟೆ ನವೀಕರಣದ ಬಗ್ಗೆ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಸಗಟು ಹಾಗೂ ಚಿಲ್ಲರೆ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಆಗುವವರೆಗೆ ನಮಗೆ ಸೆಂಟ್ರಲ್ ಮಾರುಕಟ್ಟೆಯ ಕಟ್ಟಡದಲ್ಲಿಯೇ ವ್ಯಾಪಾರ ನಡೆಸಲು ಅವಕಾಶ ನೀಡಬೇಕು.
- ಮುಸ್ತಫ ಕುಂಞಿ, ಅಧ್ಯಕ್ಷರು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ.
ಸುರಕ್ಷಿತ ಅಂತರದ ಬಗ್ಗೆ ಧ್ವನಿ ಎತ್ತಿದ ಶಾಸಕರು ಎಪಿಎಂಸಿಗೆ ಬರಲೇ ಇಲ್ಲ!
ಕೊರೋನ ಹಿನ್ನೆಲೆಯಲ್ಲಿ ಜನತಾಕರ್ಫ್ಯೂ ಹೇರಿದ್ದ ಸಂದರ್ಭ ಹಾಗೂ ಲಾಕ್‌ಡೌನ್ ಆರಂಭದ ದಿನಗಳಲ್ಲಿ ಜಿಲ್ಲಾಡಳಿತ ದಿನಸಿ ಖರೀದಿಗೆ ಸಮಯ ನಿಗದಿಪಡಿಸಿ, ಸೆಂಟ್ರಲ್ ಮಾರುಕಟ್ಟೆಯಲ್ಲಿ ಹಣ್ಣು ತರಕಾರಿ ಸಗಟು ವ್ಯಾಪಾರಕ್ಕೆ ರಾತ್ರಿ ವ್ಯಾಪಾರಕ್ಕೆ ಸಮಯ ನಿಗದಿಪಡಿಸಿತ್ತು. ಆ ಸಂದರ್ಭ ರಾತ್ರಿ 1 ಗಂಟೆಯ ವೇಳೆಗೆ ಸೆಂಟ್ರಲ್ ಮಾರುಕಟ್ಟೆ ಆಗಮಿಸಿದ್ದ ಸ್ಥಳೀಯ ಶಾಸಕರು ಮಾರುಕಟ್ಟೆಯಲ್ಲಿ ಸುರಕ್ಷಿತ ಅಂತರ ಅಸಾಧ್ಯವಾಗುತ್ತಿರುವ ಬಗ್ಗೆ ಧ್ವನಿ ಎತ್ತಿದ್ದರು. ಆದರೆ ಎಪಿಎಂಸಿಗೆ ಸ್ಥಳಾಂತರಗೊಂಡ ಬಳಿಕ ಅಲ್ಲಿನ ಸುರಕ್ಷಿತ ಅಂತರ ಪರಿಶೀಲನೆಗೆ ಹಗಲು ಹೊತ್ತಿನಲ್ಲೂ ಶಾಸಕರು ಭೇಟಿ ನಿೀಡದಿರುವುದು ಬೇಸರದ ಸಂಗತಿ.
- ಜನಾರ್ದನ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ, ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘ







