‘ಮುಸ್ಲಿಂ ಎಂದು ಭಾವಿಸಿ ಥಳಿಸಿದೆ’ ಎಂದು ವಕೀಲನಿಗೆ ಹೇಳಿದ್ದ ಪೊಲೀಸ್ ಅಧಿಕಾರಿ ಅಮಾನತು
ಭೋಪಾಲ, ಮೇ 21: ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ವಕೀಲನ ಮೇಲೆ ಪೊಲೀಸರು ನಡೆಸಿದ ಹಲ್ಲೆ ತಪ್ಪು ಗ್ರಹಿಕೆಯಿಂದ ನಡೆದಿದೆ. ‘ವಕೀಲ ಮುಸ್ಲಿಂ ಎಂದು ತಪ್ಪಾಗಿ ಭಾವಿಸಿ ಹಲ್ಲೆ ನಡೆಸಲಾಗಿದೆ’ ಎಂದು ಸಮಜಾಯಿಷಿ ನೀಡಿದ್ದ ಪೊಲೀಸ್ ಅಧಿಕಾರಿಯನ್ನು ಬುಧವಾರ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಮಾರ್ಚ್ 23ರಂದು ಹಲ್ಲೆ ಘಟನೆ ನಡೆದಿತ್ತು. ಕೊರೋನ ವೈರಸ್ ಸೋಂಕು ವಿರುದ್ಧ ನಿರ್ಬಂಧ ವಿಧಿಸಿದ್ದ ಮಧ್ಯೆಯೇ ವಕೀಲ ದೀಪಕ್ ಬುಂಡೇಲೆ ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಜಿಲ್ಲಾಸ್ಪತ್ರೆಗೆ ಹೊರಟಿದ್ದರು. ಅವರನ್ನು ತಡೆದಿದ್ದ ಪೊಲೀಸರು ನಿರ್ದಯವಾಗಿ ಥಳಿಸಿದ್ದರು.
ತಾನೊಬ್ಬ ವಕೀಲನಾಗಿದ್ದು ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ದೀಪಕ್ ಹೇಳಿದಾಗ ಪೊಲೀಸರು ಅವರನ್ನು ಬಿಟ್ಟಿದ್ದಾರೆ. ಬಳಿಕ ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಕೋರಿ ಹಲವು ಇಲಾಖೆಗಳಿಗೆ ದೂರು ನೀಡಿದ್ದರು. ಅಲ್ಲದೆ ಘಟನೆಗೆ ಸಾಕ್ಷಿಯಾಗಿರುವ ಸಿಸಿಟಿವಿ ದೃಶ್ಯಾವಳಿ ಒದಗಿಸಬೇಕೆಂದು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಆದರೆ ಎರಡು ತಿಂಗಳಾದರೂ ಎಫ್‌ಐಆರ್ ದಾಖಲಿಸಲೂ ಇಲ್ಲ, ಸಿಸಿಟಿವಿ ದೃಶ್ಯಾವಳಿಯನ್ನೂ ನೀಡಿಲ್ಲ ಎಂದು ದೀಪಕ್ ಹೇಳಿದ್ದಾರೆ.
ಈ ಮಧ್ಯೆ, ಘಟನೆಯ ತನಿಖೆ ನಡೆಸಲು ನೇಮಕವಾಗಿದ್ದ ತನಿಖಾಧಿಕಾರಿ ಬಿಎಸ್ ಪಟೇಲ್ ಮೇ 17ರಂದು ದೀಪಕ್‌ನ ಹೇಳಿಕೆ ದಾಖಲಿಸಲು ಮನೆಗೆ ಬಂದಿದ್ದರು. ಆಗ ಘಟನೆಯನ್ನು ಉಲ್ಲೇಖಿಸಿದ್ದ ಪಟೇಲ್, ನಿಮ್ಮ ಗಡ್ಡವನ್ನು ನೋಡಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ ಎಂದು ಪೊಲೀಸರು ತಪ್ಪಾಗಿ ಭಾವಿಸಿ ಥಳಿಸಿದ್ದಾರೆ ಎಂದಿದ್ದರು ಎನ್ನಲಾಗಿದೆ. ಈ ಹೇಳಿಕೆಯನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ದೀಪಕ್ ಬಳಿಕ ಸ್ಥಳೀಯ ಮಾಧ್ಯಮಕ್ಕೆ ಹಸ್ತಾಂತರಿಸಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಬುಧವಾರ ಪಟೇಲ್‌ರನ್ನು ಅಮಾನತುಗೊಳಿಸಿ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.