‘‘ಅವರಿಗೆ ಉಪವಾಸವಿದ್ದರೂ ನಮಗೆ ಅತ್ಯುತ್ತಮ ಆಹಾರ ಪೂರೈಸಿದರು’’
ಭಟ್ಕಳದ ‘ತಂಝೀಮ್’ನ ಕ್ವಾರಂಟೈನ್ ಕೇಂದ್ರದಲ್ಲಿದ್ದ ಜಗದೀಶ್ ನಾಯ್ಕ್ ಸಹಿತ ನಾಲ್ವರ ಮೆಚ್ಚುಗೆಯ ಮಾತುಗಳು

ಮಂಗಳೂರು, ಮೇ 21: ‘‘ರಮಝಾನ್ ಉಪವಾಸದ ಸಂದರ್ಭವಾಗಿರುವುದರಿಂದ ನಮಗೆ ಆ ಕ್ವಾರಂಟೈನ್ ಕೇಂದ್ರದಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ಸಿಗುವ ಬಗ್ಗೆ, ನಮ್ಮ ಆರೈಕೆ ವ್ಯವಸ್ಥೆ ಹೇಗಿರಬಹುದು ಎಂಬ ಆತಂಕವಿತ್ತು. ಹಾಗಾಗಿ ಆ ಕ್ವಾರಂಟೈನ್ ಕೇಂದ್ರಕ್ಕೆ ಹೋಗಲು ಒಂಥರಾ ಹಿಂಜರಿಕೆಯೂ ಇತ್ತು. ಆದರೆ ಅಲ್ಲಿಗೆ ಹೋದ ದಿನವೇ ನಮ್ಮೆಲ್ಲ ಆತಂಕ ದೂರವಾಯಿತು. ನಮ್ಮ ನಿರೀಕ್ಷೆಗೂ ಮೀರಿ ಅವರು ನಮ್ಮನ್ನು ಚೆನ್ನಾಗಿ ಆರೈಕೆ ಮಾಡಿದರು. ಅಲ್ಲಿ 14 ದಿನಗಳು ಹೇಗೆ ಕಳೆಯಿತು ಅಂತ ಗೊತ್ತೇ ಆಗಲಿಲ್ಲ...’’
ಇದು ಭಟ್ಕಳದ ಸಾಮಾಜಿಕ ಸಂಘಟನೆ ‘ಮಜ್ಲಿಸ್ ಇಸ್ಲಾಹ ವ ತಂಝೀಮ್’ ಉಸ್ತುವಾರಿ ವಹಿಸಿಕೊಂಡಿದ್ದ ಕ್ವಾರಂಟೈನ್ ಕೇಂದ್ರದಲ್ಲಿ ನಿಗಾ ಅವಧಿಯನ್ನು ಪೂರೈಸಿದ ಭಟ್ಕಳದ ಮನ್‌ಕುಲಿ ನಿವಾಸಿ ಜಗದೀಶ್ ನಾಯ್ಕ್ ರ ಮೆಚ್ಚುಗೆಯ ಮಾತುಗಳು. ಜಗದೀಶ್ ಜೊತೆ ಭಟ್ಕಳ ಪರಿಸರದ ಜಯಂತ್, ದಯಾನಂದ, ಪ್ರವೀಣ್ ಎಂಬವರೂ ಕೂಡಾ ಇದೇ ಕೇಂದ್ರದಲ್ಲಿ ಕ್ವಾರಂಟೈನ್ ಆಗಿದ್ದು, ಅವರು ಕೂಡ ಜಗದೀಶ್ರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ಉದ್ಯೋಗಿಯಾಗಿದ್ದ ಜಗದೀಶ್ ನಾಯ್ಕ್ ಕೊರೋನ-ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಮೇ 6ರಂದು ಬಸ್ಸಿನಲ್ಲಿ ಭಟ್ಕಳಕ್ಕೆ ಆಗಮಿಸಿದ ಅವರು ‘ಮಜ್ಲಿಸ್ ಇಸ್ಲಾಹ ವ ತಂಝೀಮ್’ ಉಸ್ತುವಾರಿ ವಹಿಸಿದ್ದ ಮುರ್ಡೇಶ್ವರದ ತನ್ವೀರುಲ್ ಇಸ್ಲಾಮ್ ಮದ್ರಸದಲ್ಲಿ ಕ್ವಾರಂಟೈನ್‌ಗೊಳಗಾಗಿದ್ದರು. ನಿಗಾ ಅವಧಿ ಮುಗಿಸಿ ಮೇ 20ರಂದು ಬಿಡುಗಡೆಗೊಂಡ ಜಗದೀಶ್ ಅವರು, ‘ತಂಝೀಮ್’ ಕಾರ್ಯವೈಖರಿಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ್ದಾರೆ.
‘‘ನಾವಿದ್ದ ಕ್ವಾರಂಟೈನ್ ಕೇಂದ್ರದ ಉಸ್ತುವಾರಿಯನ್ನು ಭಟ್ಕಳದ ಶತಮಾನದ ಇತಿಹಾಸವಿರುವ ಸಾಮಾಜಿಕ ಸಂಘಟನೆ ‘ಮಜ್ಲಿಸ್ ಇಸ್ಲಾಹ ವ ತಂಝೀಮ್’ ನವರು ವಹಿಸಿಕೊಂಡಿದ್ದರು. ಆರಂಭದಲ್ಲಿ ನಮಗಿದು ಗೊತ್ತಿರಲಿಲ್ಲ. ಯಾವ ಕೇಂದ್ರವಾದರೂ ಸರಿ, ಕಾಲ ಕಾಲಕ್ಕೆ ಉತ್ತಮ ಆಹಾರ, ವಸತಿ ವ್ಯವಸ್ಥೆ ಸಿಕ್ಕರೆ ಸಾಕು ಎಂದು ನಮಗೆ ಅನಿಸುತ್ತಿತ್ತು. ಅಂತೂ ನಾವು ಕ್ವಾರಂಟೈನ್ ಕೇಂದ್ರವಾಗಿದ್ದ ಆ ಮದ್ರಸಕ್ಕೆ ತೆರಳಿದಾಗ ‘ತಂಝೀಮ್’ ಸಂಘಟನೆಯವರು ನಮ್ಮ ಜವಾಬ್ದಾರಿ ವಹಿಸಿದ್ದಾರೆ ಎಂದು ತಿಳಿಯಿತು. ಆದರೆ ರಮಝಾನ್‌ನ ಉಪವಾಸದ ಸಂದರ್ಭ ಇವರೆಲ್ಲಾ ನಮ್ಮನ್ನು ಹೇಗೆ ಉಪಚರಿಸಬಹುದು ಎಂಬ ಆತಂಕವಿತ್ತು. ಆ ಆತಂಕ ಒಂದೇ ದಿನದಲ್ಲಿ ದೂರವಾಯಿತು. ಅವರಿಗೆ ಉಪವಾಸವಿದ್ದರೂ ನಮ್ಮನ್ನು ಉಪವಾಸದಲ್ಲಿ ಇರಿಸಲಿಲ್ಲ. ನಮಗೆ ಸಕಾಲಕ್ಕೆ ಒಳ್ಳೊಳ್ಳೆಯ ಆಹಾರ ಒದಗಿಸಿದರು. ಶುದ್ಧ ನೀರು ಪೂರೈಸಿದರು. ನಮಗೆ ಆವಶ್ಯವಿರುವ ಅಗತ್ಯ ಸಾಮಗ್ರಿಗಳನ್ನು ಒದಗಿಸಿದರು. ಸವಿ ಮಾತುಗಳಿಂದಲೇ ನಮ್ಮ ಹೃದಯ ಗೆದ್ದರು’’
‘‘ನಾನೇನು ಮುಸ್ಲಿಮರಿಂದ ಪ್ರತ್ಯೇಕವಾಗಿದ್ದವನಲ್ಲ. ನನ್ನ ಮನೆಯ ಸುತ್ತಮುತ್ತ ಮುಸ್ಲಿಮರು ವಾಸವಾಗಿದ್ದರು. ನಾನು ಅವರ ಮಧ್ಯೆಯೇ ಬೆಳೆದವ. ಕ್ವಾರಂಟೈನ್ ಕೇಂದ್ರದಲ್ಲಿ ಮಜ್ಲಿಸ್ ಇಸ್ಲಾಹ್ ವ ತಂಝೀಮ್‌ನ ಪ್ರತಿಯೊಬ್ಬರು ತೋರಿದ ಪ್ರೀತಿ, ಕಾಳಜಿಯನ್ನು ನನ್ನ ಜೀವಮಾನದಲ್ಲಿ ಮರೆಯಲು ಸಾಧ್ಯವಿಲ್ಲ. ಬೆಂಗಳೂರಿನಿಂದ ನಮ್ಮ ಜೊತೆ ಬಂದಿದ್ದ ಇತರ ಕೆಲವರು ಬೇರೆ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಅವರ ಜೊತೆ ಮೊಬೈಲ್ ಫೋನ್ ಸಂಪರ್ಕದಲ್ಲಿದ್ದಾಗ ಅಲ್ಲಿನ ಸಮಸ್ಯೆಗಳನ್ನೆಲ್ಲಾ ಹೇಳುತ್ತಿದ್ದರು. ನಮಗೆ ನಮ್ಮ ಕೇಂದ್ರದ ವ್ಯವಸ್ಥೆಯನ್ನು ಗಮನಿಸುವಾಗ ನಾನು ಧನ್ಯ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಈ ಸಂದರ್ಭ ಮೌಲಾನಾ ಅಬೂ ಮುಹಮ್ಮದ್, ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯ ಸಾದಿಕ್ ಮಟ್ಟ ಅವರನ್ನು ವಿಶೇಷವಾಗಿ ನೆನಪಿಸಲೇಬೇಕಿದೆ’’ ಎಂದು ಜಗದೀಶ್ ನಾಯ್ಕ್ ಮನದುಂಬಿ ನುಡಿಯುತ್ತಾರೆ.







