ಸೈಕಲ್ ಫೆಡರೇಶನ್ ನೀಡಿದ ಆಫರ್ ತಿರಸ್ಕರಿಸಿದ ಭಾರತದ ‘ಬೈಸಿಕಲ್ ಗರ್ಲ್’ ಜ್ಯೋತಿ ಕುಮಾರಿ
ಪಾಟ್ನಾ, ಮೇ 24: ಲಾಕ್‌ಡೌನ್‌ನಿಂದಾಗಿ ಕಂಗಾಲಾಗಿದ್ದ ತನ್ನ ಅನಾರೋಗ್ಯಪೀಡಿತ ತಂದೆಯನ್ನು ಸೈಕಲ್‌ನ ಹಿಂಬದಿಯಲ್ಲಿ ಕೂರಿಸಿಕೊಂಡು ಹರ್ಯಾಣದ ಗುರುಗ್ರಾಮದಿಂದ ಬಿಹಾರದ ದರ್ಭಾಂಗ ವರೆಗೆ ಸುಮಾರು 1,300 ಕಿ.ಮೀ. ತನಕ ಸೈಕಲ್ ತುಳಿದು ದೇಶದ ಗಮನ ಸೆಳೆದಿದ್ದ ಭಾರತದ ಬೈಸಿಕಲ್ ಬಾಲಕಿ ಎಂದೇ ಖ್ಯಾತಿ ಪಡೆದಿರುವ ಜ್ಯೋತಿ ಕುಮಾರಿ ಭಾರತದ ಸೈಕ್ಲಿಂಗ್ ಫೆಡರೇಶನ್ ನೀಡಿದ ಟ್ರಯಲ್ ಆಫರ್‌ನ್ನು ತಿರಸ್ಕರಿಸಿದ್ದು, ಶಿಕ್ಷಣದತ್ತ ಗಮನ ನೀಡುವ ಒಲವು ವ್ಯಕ್ತಪಡಿಸಿದ್ದಾರೆ.
15ರ ಹರೆಯದ ಬಾಲಕಿ ತನ್ನ ತಂದೆಯನ್ನು ಸೈಕಲ್ ಕ್ಯಾರಿಯರ್‌ನಲ್ಲಿ ,ಕೂರಿಸಿಕೊಂಡು ತನ್ನ ಊರಿಗೆ ಪ್ರಯಾಣಿಸುವ ಮೂಲಕ ದೇಶ ಮಾತ್ರವಲ್ಲ ವಿಶ್ವದಾದ್ಯಂತ ಶ್ಲಾಘನೆಗೆ ಒಳಗಾಗಿದ್ದರು. ಭಾರತದ ಸೈಕ್ಲಿಂಗ್ ಫೆಡರೇಶನ್ ಹೊಸದಿಲ್ಲಿಯ ರಾಷ್ಟ್ರೀಯ ಸೈಕ್ಲಿಂಗ್ ಅಕಾಡಮಿಯಲ್ಲಿ ಟ್ರೈನಿ ಆಗಿ ಟ್ರಯಲ್ಸ್ ನಡೆಸುವ ಆಫರ್‌ರನ್ನು ನೀಡಿತ್ತು.
ತನ್ನ ತಂದೆಯನ್ನು ಕೂರಿಸಿಕೊಂಡು ಒಂದು ವಾರದಲ್ಲಿ 1,300 ಕಿ.ಮೀ. ಸೈಕಲ್ ತುಳಿದಿರುವ ಜ್ಯೋತಿಯ ಸಾಮರ್ಥ್ಯದಿಂದ ನಾವೆಲ್ಲರೂ ಪ್ರಭಾವಿತರಾಗಿದ್ದೇವೆ. ಬಾಲಕಿಗೆ ತನ್ನ ಸಾಮರ್ಥ್ಯ ಪ್ರದರ್ಶಿಸಲು ನಾವು ಅವಕಾಶ ಸಿಎಫ್‌ಐ ಅವಕಾಶ ನೀಡುತ್ತದೆ ಎಂದು ಸಿಎಫ್‌ಐ ಅಧ್ಯಕ್ಷ ಓಂಕಾರ್ ಸಿಂಗ್ ಹೇಳಿದ್ದಾರೆ.
‘‘ನನ್ನು ಕುಟುಂಬದ ಸಮಸ್ಯೆಯಿಂದಾಗಿ ಈ ಮೊದಲು ನನಗೆ ಶಿಕ್ಷಣ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ನಾನು ಮನೆಕೆಲಸದ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಇದೀಗ ನಾನು ಪ್ರೌಢ ಶಿಕ್ಷಣ ಮುಗಿಸಲು ಮೊದಲ ಆದ್ಯತೆ ನೀಡುವೆ. ಅಷ್ಟೊಂದು ದೂರ ಸೈಕಲ್‌ನಲ್ಲಿ ಬಂದು ನಾನೀಗ ದೈಹಿಕವಾಗಿ ದುರ್ಬಲವಾಗಿದ್ದೇನೆ'' ಎಂದು ಜ್ಯೋತಿ ಹೇಳಿದ್ದಾಳೆ.
ಜ್ಯೋತಿಯ ತಂದೆ ಇ-ರಿಕ್ಷಾ ನಡೆಸುವಾಗ ಅಪಘಾತಕ್ಕೀಡಾಗಿ ಒಂದು ಕಾಲು ಮುರಿದುಹೋಗಿತ್ತು. ಹೀಗಾಗಿ ಜನವರಿಯಲ್ಲಿ ಜ್ಯೋತಿ ದಿಲ್ಲಿಗೆ ತೆರಳಿದ್ದರು. ಜ್ಯೋತಿಯ ತಾಯಿ ಹಾಗೂ ಸೋದರ ಮಾವ ಬಿಹಾರಕ್ಕೆ ವಾಪಸಾದರೆ, ಜ್ಯೋತಿ ತನ್ನ ತಂದೆಯನ್ನು ನೋಡಿಕೊಳ್ಳಲು ದಿಲ್ಲಿಯಲ್ಲೇ ಉಳಿದಿದ್ದರು.