ಆಹಾರ ವಿತರಿಸಿ ಬಿಹಾರ, ಒಡಿಶಾ ವಲಸೆ ಕಾರ್ಮಿಕರನ್ನು ಬೀಳ್ಕೊಟ್ಟ ಡಾ. ಅಶ್ವತ್ಥ ನಾರಾಯಣ

ಬೆಂಗಳೂರು: ಕೊವಿಡ್ ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ತಮ್ಮ ಊರಿಗೆ ಪ್ರಯಾಣ ಬೆಳೆಸಿರುವ ಬಿಹಾರ ಹಾಗೂ ಒಡಿಶಾ ಮೂಲದ ವಲಸೆ ಕಾರ್ಮಿಕರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಬೀಳ್ಕೊಟ್ಟರು.
ಬಿಹಾರ ಹಾಗೂ ಒಡಿಶಾಗೆ ಪ್ರಯಾಣ ಬೆಳೆಸಿರುವ ವಲಸೆ ಕಾರ್ಮಿಕರನ್ನು ಕಂಟೈನ್ಮೆಂಟ್ ರೈಲು ನಿಲ್ದಾಣದಲ್ಲಿ ಭಾನುವಾರ ಭೇಟಿ ಮಾಡಿ ಅವರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
"ಈ ದಿನ ಕಂಟೈನ್ಮೆಂಟ್ ರೈಲು ನಿಲ್ದಾಣದಿಂದ 5 ಶ್ರಮಿಕ್ ಎಕ್ಸ್‌ಪ್ರೆಸ್ ರೈಲಿಗಳಲ್ಲಿ ಏಳೂವರೆ ಸಾವಿರ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಒಂದು ರೈಲಿನಲ್ಲಿ ಒಂದೂವರೆ ಸಾವಿರ ಕಾರ್ಮಿಕರು ಪ್ರಯಾಣಿಸಲಿದ್ದಾರೆ. 2 ದಿನಗಳಿಗೆ ಬೇಕಾಗುವ ಆಹಾರ ಪೊಟ್ಟಣಗಳನ್ನು ವಿತರಿಸಿ, ಪ್ರಯಾಣಕ್ಕೆ ಶುಭ ಕೋರಲು ಬಂದೆ,"ಎಂದು ಅವರು ತಿಳಿಸಿದರು.
"ನಗರದ ನಾನಾ ಭಾಗಗಳಲ್ಲಿದ್ದ ವಲಸೆ ಕಾರ್ಮಿಕರನ್ನು ಗುರುತಿಸಿ ಸರ್ಕಾರದ ವತಿಯಿಂದ ಅವರಿಗೆ ದಿನಸಿ, ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಲಾಗಿತ್ತು. ಲಾಕ್‌ಡೌನ್ ಸಡಿಲಿಕೆ ನಂತರ ಕುಟುಂಬ ಸದಸ್ಯರನ್ನು ಭೇಟಿಯಾಗಲು ತಮ್ಮ ಊರಿಗೆ ತೆರಳಲು ಬಯಸಿರುವ ಕಾರ್ಮಿಕರಿಗೆ ರೈಲು ವ್ಯವಸ್ಥೆ ಮಾಡಲಾಗಿದೆ. ಮೇ 31ರವರೆಗೆ ಪ್ರತಿ ದಿನ 10 ರೈಲುಗಳು ರಾಜ್ಯದಿಂದ ಹೊರಡಲಿದ್ದು, ಒಟ್ಟು 126 ಶ್ರಮಿಕ್ ಎಕ್ಸ್ ಪ್ರೆಸ್ ರೈಲುಗಳಲ್ಲಿ ಕಾರ್ಮಿಕರು ಉಚಿತವಾಗಿ ಪ್ರಯಾಣ ಬೆಳೆಸಲಿದ್ದಾರೆ"ಎಂದು ವಿವರಿಸಿದರು.
ಮಕ್ಕಳಿಗೆ ಚೆನ್ನಪಟ್ಟಣದ ಗೊಂಬೆ
"ರೈಲಿನಲ್ಲಿ ಇಂದು ಪ್ರಯಾಣ ಬೆಳೆಸಿರುವ ಎಲ್ಲ ಮಕ್ಕಳಿಗೆ ರೈಲ್ವೆ ಇಲಾಖೆಯಿಂದ ಚೆನ್ನಪಟ್ಟಣದ ಗೊಂಬೆ ವಿತರಿಸಲಾಗುತ್ತಿದೆ. ವಿಮಾನ ಪ್ರಯಾಣದ ವೇಳೆ ಮಕ್ಕಳಿಗೆ ಆಟಿಕೆ ನೀಡುವ ಮಾದರಿಯಲ್ಲಿ ರೈಲಿನಲ್ಲೂ ವಲಸೆ ಕಾರ್ಮಿಕರ ಮಕ್ಕಳಿಗೆ ಮರದ ಗೊಂಬೆಗಳನ್ನು ನೀಡಲಾಗುತ್ತಿದೆ. ಇದರಿಂದ ನಮ್ಮ ರಾಜ್ಯದ ಕುಶಲಕರ್ಮಿಗಳ ಖ್ಯಾತಿ ಹೊರ ರಾಜ್ಯಗಳಿಗೂ ತಲುಪಿದಂತಾಗುತ್ತದೆ. ಇದಲ್ಲದೇ, ಎಲ್ಲ ರೈಲು ನಿಲ್ದಾಣಗಳಲ್ಲಿ ಚೆನ್ನಪಟ್ಟಣದ ಗೊಂಬೆ ಮಳಿಗೆ ತೆರೆದಿರುವುದು ಶ್ಲಾಘನಾರ್ಹ"ಎಂದರು.









