ಕೊರೋನ ಸೋಂಕು ನಿಭಾಯಿಸಿದ ದೇಶದ ಮಾದರಿ ನಗರಗಳ ಪಟ್ಟಿಯಲ್ಲಿ ಬೆಂಗಳೂರು
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಇಡೀ ದೇಶ ಕೋವಿಡ್-19 ಬಿಗಿಹಿಡಿತದಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಜೈಪುರ, ಇಂಧೋರ್, ಚೆನ್ನೈ ಮತ್ತು ಬೆಂಗಳೂರು ಈ ಸೋಂಕನ್ನು ಯಶಸ್ವಿಯಾಗಿ ನಿಭಾಯಿಸಿದ ನಗರಗಳು ಎನಿಸಿದ್ದು, ಇತರ ನಗರಗಳಿಗೆ ಮಾದರಿಯಾಗಿವೆ.
ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ನಡುವೆ ಕೋವಿಡ್-19 ನಿಭಾಯಿಸುವ ಸಂಬಂಧ ವಿಚಾರ ವಿನಿಮಯಕ್ಕೆ ಸಭೆ ಆಯೋಜಿಸಿತ್ತು. ಪರಿಣಾಮಕಾರಿಯಾಗಿ ಪ್ರಕರಣಗಳನ್ನು ನಿಭಾಯಿಸುವ ಮೂಲಕ ಸಾವಿನ ದರವನ್ನು ಕಡಿಮೆ ಮಾಡುವ ಮಾರ್ಗೋಪಾಯಗಳ ಬಗ್ಗೆ ಇದರಲ್ಲಿ ಚರ್ಚಿಸಲಾಯಿತು ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜೈಪುರ ಮತ್ತು ಇಂಧೋರ್ ಮಹಾನಗರ ಪಾಲಿಕೆಗಳು ಪ್ರಕರಣಗಳನ್ನು ವಿನೂತನ ವಿಧಾನದ ಮೂಲಕ ನಿಭಾಯಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ, ಚೆನ್ನೈ ಹಾಗೂ ಬೆಂಗಳೂರು ದೊಡ್ಡ ಸಂಖ್ಯೆಯ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿ ಸಾವಿನ ದರವನ್ನು ಕನಿಷ್ಠಗೊಳಿಸಲು ಸಾಧ್ಯವಾಗಿದೆ.
ಕಡಿಮೆ ಅವಧಿಯಲ್ಲೇ ಪ್ರಕರಣಗಳು ದುಪ್ಪಟ್ಟಾಗುತ್ತಿರುವುದು, ಸೋಂಕು ದೃಢಪಡುವ ದರ ಅತ್ಯಧಿಕವಾಗಿರುವುದು ಮತ್ತು ಸಾವಿನ ಪ್ರಮಾಣ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಅತ್ಯಧಿಕವಾಗಿರುವುದು ಮುಂತಾದ ಸಮಸ್ಯೆಗಳು ಹಲವು ಮಹಾನಗರಗಳನ್ನು ಕಾಡುತ್ತಿವೆ.
ಕಂಟೈನ್ಮೆಂಟ್ ವಲಯಗಳ ಪರಿದಿ ನಿಯಂತ್ರಣ, ಬಫರ್ ಝೋನ್ಗಳ ನಕ್ಷೆ ಸಿದ್ಧಪಡಿಸುವುದು ಮತ್ತು ಮನೆ ಮನೆ ಆರೋಗ್ಯ ಸಮೀಕ್ಷೆ ಪರಿಣಾಮಕಾರಿ ನಿರ್ವಹಣೆಗೆ ಅಗತ್ಯ. ಕೊಳಗೇರಿಗಳು ಮತ್ತು ಅಧಿಕ ಜನಸಾಂದ್ರತೆಯ ಪ್ರದೇಶಗಳು ನಗರದಲ್ಲಿ ಅತ್ಯಧಿಕ ಅಪಾಯ ಸಾಧ್ಯತೆಯ ತಾಣಗಳು ಎನಿಸಿಕೊಂಡಿವೆ.
ಇಂಧೋರ್ ಹಾಗೂ ಜೈಪುರ ಮನೆಮನೆ ಸಮೀಕ್ಷೆ ಮತ್ತು ಸಂಪರ್ಕಗಳನ್ನು ಪತ್ತೆ ಮಾಡುವಲ್ಲಿ ಗಣನೀಯ ಸಾಧನೆ ಮಾಡಿವೆ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯ ಪ್ರಕರಣಗಳಿದ್ದರೂ, ಸಾವಿನ ದರವನ್ನು ಶೇಕಡ 1ಕ್ಕಿಂತ ಕಡಿಮೆ ಇರಿಸುವುದು ಸಾಧ್ಯವಾಗಿದೆ. ದೇಶದ ಸರಾಸರಿ ಶೇಕಡ 3.
ವೆಂಟಿಲೇಟರ್ ಗಳ ಬಳಕೆಯ ಗರಿಷ್ಠ ಪ್ರಯೋಜನ ಪಡೆಯುವುದು ಮತ್ತು ತುರ್ತು ಅಗತ್ಯತೆಯನ್ನು ನಿರ್ಧರಿಸಿ ಪ್ರಕರಣಗಳನ್ನು ನಿಭಾಯಿಸುವ ಮೂಲಕ ಬೆಂಗಳೂರು ಹಾಗೂ ಚೆನ್ನೈ ಕೋವಿಡ್-19 ಚಿಕಿತ್ಸೆಗೆ ಉತ್ತಮ ಉದಾಹರಣೆ ಎನಿಸಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.