ನಾಗ್ಪುರ: ಮೃತ ವೃದ್ಧನ ಶವ ಪಡೆಯಲು ಪುತ್ರನ ನಕಾರ,ಸಕಲ ವ್ಯವಸ್ಥೆ ಮಾಡಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಮುಸ್ಲಿಂ ಜಮಾಅತ್!
ನಾಗ್ಪುರ, ಮೇ 25 : ಇಲ್ಲಿನ 78 ವರ್ಷ ವಯಸ್ಸಿನ ವೃದ್ಧರೊಬ್ಬರು ಹೃದಯಾಘಾತದಿಂದ ನಿಧನರಾದ ಬಳಿಕ ಅವರ ಅಂತಿಮ ಸಂಸ್ಕಾರ ನಡೆಸಲು ಕುಟುಂಬ ಸದಸ್ಯರೇ ನಿರಾಕರಿಸಿದ ಬೆನ್ನಿಗೆ ಸ್ಥಳೀಯ ಮುಸ್ಲಿಂ ಸಂಸ್ಥೆಯೊಂದರ ಯುವಕರು ಮುಂದೆ ನಿಂತು ಅಂತಿಮ ಸಂಸ್ಕಾರ ನಡೆಸಿದ ಘಟನೆ ವರದಿಯಾಗಿದೆ.
ವೃದ್ಧ ಹೃದಯಾಘಾತದಿಂದ ನಿಧನರಾಗಿದ್ದು ಅವರ ಪತ್ನಿ ಕೊರೊನ ಸೋಂಕಿತರಾಗಿ ಅಕೋಲ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ವ್ಯಕ್ತಿಯ ಪುತ್ರ ನಾಗ್ಪುರ ನಿವಾಸಿ ತಂದೆಯ ಮೃತದೇಹ ಪಡೆಯಲು ಮತ್ತು ಅಂತಿಮ ಸಂಸ್ಕಾರ ನಡೆಸಲು ನಿರಾಕರಿಸಿದ್ದಾನೆ. ಆಗ ಸ್ಥಳೀಯ ಮುಸ್ಲಿಂ ಸಂಸ್ಥೆ ಅಕೋಲ ಕಚ್ಚಿ ಮೆಮನ್ ಜಮಾಅತ್ ನವರು ಈ ಜವಾಬ್ದಾರಿ ವಹಿಸಿಕೊಂಡರು. ಕೆಲವು ಮುಸ್ಲಿಂ ಯುವಕರೇ ಇಲ್ಲಿನ ರುದ್ರಭೂಮಿಯಲ್ಲಿ ಮೃತರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು ಎಂದು ಅಕೋಲ ಮುನಿಸಿಪಲ್ ಕಾರ್ಪೊರೇಷನ್ ನ ಅಧಿಕಾರಿ ಪ್ರಶಾಂತ್ ರಾಜುರ್ಕರ್ ಅವರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಅಕೋಲ ಮಹಾರಾಷ್ಟ್ರದಲ್ಲೇ ಅತಿಹೆಚ್ಚು ಕೊರೊನ ಸೋಂಕಿತರ ಪ್ರದೇಶಗಳಲ್ಲಿ ಒಂದು. ಅಲ್ಲಿ ಈಗಾಗಲೇ 400 ಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದು 25 ಮಂದಿ ಮೃತಪಟ್ಟಿದ್ದಾರೆ. ಪತ್ನಿ ಕೊರೊನ ಸೋಂಕಿನ ಲಕ್ಷಣಗಳು ಕಂಡು ಬಂದು ಆಸ್ಪತ್ರೆ ಸೇರಿದ್ದು, ಪತಿ ಮನೆಯಲ್ಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಅಮರಾವತಿ ವಿಭಾಗೀಯ ಆಯುಕ್ತ ಪಿಯೂಷ್ ಸಿಂಗ್ ಹೇಳಿದ್ದಾರೆ.
" ಅಕೋಲದಲ್ಲಿ ಕರೋನದಿಂದ ಮೊದಲ ವ್ಯಕ್ತಿ ಮೃತಪಟ್ಟಾಗ ಯಾರ ಕುಟುಂಬಕ್ಕೆ ಅಂತಿಮ ಸಂಸ್ಕಾರ ನಡೆಸಲು ಸಾಧ್ಯವಿಲ್ಲವೋ ಅವರ ಅಂತಿಮ ಸಂಸ್ಕಾರ ನಾವು ನಡೆಸುವುದಾಗಿ ನಿರ್ಧರಿಸಿದೆವು. ಮೊದಲ ಅಂತಿಮ ಸಂಸ್ಕಾರಕ್ಕೆ ಅವರ ಮನೆಯವರು ಅನುಮತಿ ನೀಡಿದರು. ಆ ಬಳಿಕ ನಾವು 60 ಮೃತರ ಅಂತಿಮ ಸಂಸ್ಕಾರ ನಡೆಸಿದೆವು. ಆ ಪೈಕಿ 21 ಮಂದಿ ಕೊರೊನ ಸೋಂಕಿತರಾಗಿದ್ದರು. ಅದರಲ್ಲಿ ಐವರು ಹಿಂದೂಗಳು " ಎಂದು ಅಕೋಲ ಕಚ್ಚಿ ಮೆಮನ್ ಜಮಾಅತ್ ಅಧ್ಯಕ್ಷ ಜಾವೇದ್ ಝಕರಿಯ ಹೇಳಿದ್ದಾರೆ.
ಸಾಮಾನ್ಯವಾಗಿ ಈ ಸಂಸ್ಥೆಯ ಸ್ವಯಂಸೇವಕರು ಪೂರ್ಣ ಸುರಕ್ಷತಾ ಉಡುಪುಗಳೊಂದಿಗೆ ಅಂತಿಮ ಸಂಸ್ಕಾರಕ್ಕೆ ಎಲ್ಲ ವ್ಯವಸ್ಥೆ ಮಾಡಿ ಚಿತೆ ಸಿದ್ಧಪಡಿಸಿ ಬಿಟ್ಟು ಬಿಡುತ್ತಾರೆ. ಆದರೆ ರವಿವಾರದ ಪ್ರಕರಣದಲ್ಲಿ ಚಿತೆಗೆ ಅಗ್ನಿ ಸ್ಪರ್ಶವನ್ನೂ ಅವರೇ ಮಾಡಬೇಕಾಯಿತು. ಅಂತಿಮ ಸಂಸ್ಕಾರಕ್ಕೆ ಬಾರದ ಪುತ್ರ ಅದರ ಖರ್ಚಿಗಾಗಿ 5000 ರೂ. ಕೊಟ್ಟಿದ್ದಾರೆ ಎಂದು ರಾಜುರ್ಕರ್ ಹೇಳಿದ್ದಾರೆ.