‘ಝೀ ಮೀಡಿಯಾ’ದ 49 ಉದ್ಯೋಗಿಗಳಲ್ಲಿ ಕೊರೋನ ಸೋಂಕು: ಐದಂತಸ್ತಿನ ಕಟ್ಟಡ ಸೀಲ್ ಡೌನ್

ನೊಯ್ಡಾ : ನೊಯ್ಡಾದ ಸೆಕ್ಟರ್ 16 ಎ ಫಿಲ್ಮ್ ಸಿಟಿಯಲ್ಲಿರುವ ಝೀ ಮೀಡಿಯಾ ಸಂಸ್ಥೆಯ ಕಚೇರಿಗಳನ್ನು ಹೊಂದಿದ ಐದಂತಸ್ತಿನ ಕಟ್ಟಡವನ್ನು ಗೌತಮ್ ಬುದ್ಧ್ ನಗರ್ ಜಿಲ್ಲಾಡಳಿತ ಸೀಲ್ ಮಾಡಿದೆ. ಮೇ 24ರಂದು ನಾಲ್ಕನೇ ಅಂತಸ್ತಿನಲ್ಲಿನ 28 ಉದ್ಯೋಗಿಗಳಿಗೆ ಕೊರೋನ ಸೋಂಕು ದೃಢಪಟ್ಟಿದ್ದರೆ, ಸೋಮವಾರ ಎರಡನೇ ಅಂತಸ್ತಿನಲ್ಲಿನ ಹತ್ತು ಮಂದಿ ಉದ್ಯೋಗಿಗಳ ಪರೀಕ್ಷಾ ವರದಿ ಪಾಸಿಟಿವ್ ಆಗಿದೆ.
ಕಟ್ಟಡವನ್ನು ಸ್ಯಾನಿಟೈಸ್ ಮಾಡಿದ ನಂತರವಷ್ಟೇ ಕಟ್ಟಡದೊಳಗೆ ಉದ್ಯೋಗಿಗಳಿಗೆ ಪ್ರವೇಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಕೊರೋನ ದೃಢಪಟ್ಟ ಎಲ್ಲಾ ಉದ್ಯೋಗಿಗಳು ಕ್ವಾರಂಟೈನ್ ನಲ್ಲಿದ್ದರು. ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿಯ ತನಕ ಝೀ ಮೀಡಿಯಾದ 49 ಮಂದಿ ಉದ್ಯೋಗಿಗಳಿಗೆ ಕೊರೋನ ದೃಢಪಟ್ಟಿದೆ. ಮೇ 15ರಂದು ಸಂಸ್ಥೆಯಲ್ಲಿ ಮೊದಲ ಪ್ರಕರಣ ವರದಿಯಾದಾಗ 51 ಮಂದಿಯ ಮಾದರಿ ಸಂಗ್ರಹಿಸಲಾಗಿತ್ತು. ಇವುಗಳ ಪೈಕಿ 28 ಮಂದಿಯ ವರದಿ ಪಾಸಿಟಿವ್ ಆಗಿತ್ತು.
ಮೊದಲ ಪ್ರಕರಣ ವರದಿಯಾಗಿನಿಂದ ಸಂಸ್ಥೆಯು ಕೋವಿಡ್-19 ಕುರಿತಂತೆ ಎಲ್ಲಾ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಂಸ್ಥೆಯ ಮುಖ್ಯ ಸಂಪಾದಕ ಸುಧೀರ್ ಚೌಧರಿ ಹೇಳಿದ್ದಾರೆ.





