ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನೂರಾರು ಸತ್ತ ಬಾವಲಿಗಳು ಪತ್ತೆ, ಜನರಲ್ಲಿ ಆತಂಕ

ಗೋರಖ್‌ಪುರ, ಮೇ 27: ಗೋರಖ್‌ಪುರದ ಬೆಲ್‌ಘಾಟ್ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಾವಲಿಗಳು ಸತ್ತು ಬಿದ್ದಿರುವುದು ಪತ್ತೆಯಾಗಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.
ಜಗತ್ತಿನಾದ್ಯಂತ ವ್ಯಾಪಿಸಿರುವ ಕೊರೋನ ವೈರಸ್ ಸೋಂಕಿಗೂ ಬಾವಲಿಗಳಿಗೂ ಸಂಪರ್ಕವಿರುವುದಾಗಿ ಅಧ್ಯಯನ ವರದಿಗಳು ಬಂದಿರುವುದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಆದರೆ,ಅತಿಯಾದ ಬಿಸಿಲಿನಿಂದ ಬಾವಲಿಗಳು ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸತ್ತಿರುವ ಬಾವಲಿಗಳ ದೇಹವನ್ನು ಬರೇಲಿಯಲ್ಲಿರುವ ಭಾರತೀಯ ಪಶು ಚಿಕಿತ್ಸಾ ಸಂಶೋಧನ ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.ಸಾಮೂಹಿಕವಾಗಿ ಬಾವಲಿಗಳುಸತ್ತುಬಿದ್ದಿರುವುದಕ್ಕೆ ಕಾರಣ ತಿಳಿದುಬರಬೇಕಾಗಿದೆ.
ಇಂದು ಬೆಳಗ್ಗೆ ನನ್ನ ತೋಟದ ಮಾವಿನ ಮರದ ಬಳಿ ಹಲವು ಬಾವಲಿಗಳು ಸತ್ತುಬಿದ್ದಿರುವುದನ್ನು ನಾನು ನೋಡಿದೆ. ನನ್ನ ಪಕ್ಕದ ತೋಟದಲ್ಲೂ ಬಾವಲಿಗಳು ಸತ್ತುಬಿದ್ದಿರುವುದು ಗಮನಕ್ಕೆ ಬಂದಿದೆ. ಇನ್ನು ಕೆಲವು ಸಾಯುವ ಸ್ಥಿತಿಯಲ್ಲಿದ್ದವು ಎಂದು ಬೆಲ್‌ಘಾಟ್‌ನ ಪಂಕಜ್ ಶಶಿ ಹೇಳಿದ್ದಾರೆ.
ಉತ್ತರಭಾರತದಲ್ಲಿ ಬಿಸಿ ಗಾಳಿ ಪ್ರಭಾವ ಹೆಚ್ಚಾಗಿದ್ದು,ಹಲವ ಭಾಗಗಗಳಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ದಾಟಿದೆ.







