ಮಧ್ಯಪ್ರದೇಶ: ಶ್ರಮಿಕ್ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
ಮಂಡಸೂರ್(ಮ.ಪ್ರ),ಮೇ 27: ಶ್ರಮಿಕ್ ರೈಲಿನಲ್ಲಿ ಗುಜರಾತಿನಿಂದ ಉತ್ತರ ಪ್ರದೇಶದ ತನ್ನ ಸ್ವಗ್ರಾಮಕ್ಕೆ ಮರಳುತ್ತಿದ್ದ ವಲಸೆ ಕಾರ್ಮಿಕ ಮಹಿಳೆಯೋರ್ವಳು ಬೋಗಿಯಲ್ಲಿಯೇ ಗಂಡುಮಗುವಿಗೆ ಜನ್ಮ ನೀಡಿದ ಘಟನೆ ಬುಧವಾರ ರತ್ಲಾಮ್ ರೈಲು ನಿಲ್ದಾಣದಲ್ಲಿ ನಡೆದಿದೆ.
ತನ್ನ ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ಪೂಜಾದೇವಿ( 28)ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಸಹ ಪ್ರಯಾಣಿಕರೋರ್ವರು ರತ್ಲಾಮ್ನ ವಿಭಾಗೀಯ ರೈಲ್ವೆ ಮ್ಯಾನೇಜರ್ಗೆ ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದ್ದರು. ರೈಲು ರತ್ಲಾಮ್ ನಿಲ್ದಾಣವನ್ನು ತಲುಪುವ ಮುನ್ನ ಮಹಿಳಾ ವೈದ್ಯರ ನೇತೃತ್ವದಲ್ಲಿ ವೈದ್ಯಕೀಯ ತಂಡ ಸಜ್ಜಾಗಿ ನಿಂತಿತ್ತು. ರೈಲು ನಿಲ್ದಾಣವನ್ನು ತಲುಪಿದ ಬಳಿಕ ಬೋಗಿಯಲ್ಲಿಯೇ ಪೂಜಾದೇವಿಗೆ ಹೆರಿಗೆಯನ್ನು ಮಾಡಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಬಳಿಕ ತಾಯಿ ಮತ್ತು ನವಜಾತ ಶಿಶುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದರು.
Next Story