ಕೊಳವೆ ಬಾವಿಯೊಳಗೆ ಬಿದ್ದಿದ್ದ 3 ವರ್ಷದ ಬಾಲಕ ಸಾವು
ಹೈದರಾಬಾದ್, ಮೇ 28: ಆಟವಾಡುತ್ತಿದ್ದಾಗ ಕಾಲುಜಾರಿ ಬಿದ್ದು 120 ಅಡಿ ಆಳದ ಕೊಳವೆಬಾವಿಯೊಳಗೆ ಬಿದ್ದಿದ್ದ 3 ವರ್ಷದ ಬಾಲಕ ಸಾಯಿವರ್ಧನನ್ನು ಉಳಿಸಿಕೊಳ್ಳುವ ಪ್ರಯತ್ನ ಸಫಲವಾಗಲಿಲ್ಲ. ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ.
ರೈತ ಗೋವರ್ಧನ ಎಂಬುವವರು ಕೃಷಿ ಚಟುವಟಿಕೆಗಾಗಿ ಬುಧವಾರ ಬೋರ್‌ವೆಲ್‌ನ್ನು 120 ಅಡಿ ಆಳದ ತನಕ ಕೊರೆಸಿದ್ದರು. ಆದರೆ ನೀರು ಲಭ್ಯವಾಗಿರಲಿಲ್ಲ. ಕೊರೆದಿದ್ದ ಬೋರ್‌ವೆಲ್‌ನ್ನು ಹಾಗೆಯೇ ಬಿಟ್ಟು ಮತ್ತೊಂದು ಬೋರ್‌ವೆಲ್ ಕೊರೆಯಲು ಮುಂದಾಗಲಾಗಿತ್ತು. ಬುಧವಾರ ಸಂಜೆ ಬಾಲಕ ಬಾಯ್ತೆರೆದಿದ್ದ ಬೋರ್‌ವೆಲ್ ಸಮೀಪ ಆಡುತ್ತಿದ್ದಾಗ ಆಯತಪ್ಪಿ ಅದರೊಳಗೆ ಬಿದ್ದಿದ್ದಾನೆ.
ಬುಧವಾರ ಸಂಜೆಯಿಂದಲೇ ನಿರಂತರ ಕಾರ್ಯಾಚರಣೆ ನಡೆಸಲಾಗಿದ್ದು, ಇಂದು ಬೆಳಗ್ಗೆ 4 ಗಂಟೆಗೆ ಬಾಲಕನನ್ನು ಬೋರ್‌ವೆಲ್‌ನಿಂದ ಹೊರ ತೆಗೆಯಲಾಗಿತ್ತು. ಆದರೆ ಬಾಲಕ ಬದುಕುಳಿಯಲಿಲ್ಲ. ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿತ್ತು.
Next Story