'ಗೋಡ್ಸೆವಾದಿ' ಎಂಬ ಆರೋಪ: ಗಾಂಧಿ ಸೇವಾಗ್ರಾಮ್ ಆಶ್ರಮದ ಅಧ್ಯಕ್ಷರ ವಜಾ
ನಾಗ್ಪುರ: ಮಹಾರಾಷ್ಟ್ರ ರಾಜ್ಯದ ವಾರ್ಧಾ ಎಂಬಲ್ಲಿರುವ ಮಹಾತ್ಮಾ ಗಾಂಧೀಜಿಯವರ ಸೇವಾಗ್ರಾಮ್ ಆಶ್ರಮದ ಅಧ್ಯಕ್ಷ ಟಿ ಆರ್ ಎನ್ ಪ್ರಭು ಓರ್ವ `ಗೋಡ್ಸೆವಾದಿ'ಯಾಗಿದ್ದಾರೆ ಎಂಬ ಆರೋಪ ಸಹಿತ ಇತರ ಕಾರಣಗಳಿಗಾಗಿ ಅವರನ್ನು ಆ ಹುದ್ದೆಯಿಂದ ಕಿತ್ತು ಹಾಕಿರುವುದು ಭಾರೀ ವಿವಾದ ಸೃಷ್ಟಿಸಿದೆ.
73 ವರ್ಷದ ಪ್ರಭು ಅವರನ್ನು ಸರ್ವ ಸೇವಾ ಸಂಘ್ ಅಧ್ಯಕ್ಷ ಮಹಾದೇವ್ ವಿದ್ರೋಹಿ ಅವರು ಮಾರ್ಚ್ 18ರಂದು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರಭು ಅವರನ್ನು ಆಶ್ರಮದ ಅಧ್ಯಕ್ಷರನ್ನಾಗಿ ಮಹಾದೇವ್ ಅವರೇ ನೇಮಕಗೊಳಿಸಿದ್ದರು. ಅವರು ಅಧ್ಯಕ್ಷರಾಗಿರುವ ಸರ್ವ ಸೇವಾ ಸಂಘ್ ಎಲ್ಲಾ ಗಾಂಧಿ ಸಂಸ್ಥೆಗಳ ಉನ್ನತ ಸಂಸ್ಥೆಯಾಗಿದೆ.
ಸೇವಾಗ್ರಾಮ್ ಆಶ್ರಮದ ಇತಿಹಾಸದಲ್ಲಿಯೇ ಅಧ್ಯಕ್ಷರೊಬ್ಬರನ್ನು ಅವರ ಐದು ವರ್ಷ ಸೇವಾವಧಿ ಪೂರ್ಣಗೊಳ್ಳುವ ಮುನ್ನವೇ ಹುದ್ದೆಯಿಂದ ಕಿತ್ತು ಹಾಕಿದ ಮೊದಲ ಪ್ರಕರಣ ಇದಾಗಿದೆ.
ಆದರೆ ಪ್ರಭು ಮೇ 22ರಂದು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆಂದು ಹೇಳಲಾಗಿದೆ. ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿ ಅವರು ಪತ್ರಿಕಾ ಹೇಳಿಕೆ ಕೂಡ ಬಿಡುಗಡೆಗೊಳಿಸಿದ್ದಾರಲ್ಲದೆ ತಮ್ಮನ್ನು ಸಮರ್ಥಿಸಿಕೊಳ್ಳಲು ಆಸ್ಪದ ನೀಡದೆ ಅವಮಾನಿಸಿ ಹುದ್ದೆಯಿಂದ ಕೆಳಗಿಳಿಸಲಾಗಿದೆ ಇದು ಆಶ್ರಮದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದೂ ಅವರು ಹೇಳಿದ್ದಾರೆ.
ಅಕ್ಟೋಬರ್ 2018ರಲ್ಲಿ ಆಶ್ರಮದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಲು ಪ್ರಭು ಅನುಮತಿ ನಿರಾಕರಿಸಿದ್ದರು ಹಾಗೂ ಕೆಲ ಧರ್ಮಾಂಧರು ಉತ್ತರ ಪ್ರದೇಶದಲ್ಲಿ ಗಾಂಧಿ ಅವರ ಭಾವಚಿತ್ರಕ್ಕೆ ಗುಂಡಿಕ್ಕಿದ ಪ್ರಕರಣ ವಿರೋಧಿಸಿ ಹೇಳಿಕೆ ನೀಡಿಲ್ಲ ಎಂಬಿತ್ಯಾದಿ ಕಾರಣಗಳಿಗಾಗಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂದು ವಿದ್ರೋಹಿ ಹೇಳಿದ್ದಾರೆ.